ಚೀನೀ ಶಿಲ್ಪ

	ಪ್ರಪಂಚದ ಇತರ ಪ್ರದೇಶಗಳಂತೆ ಚೀನದಲ್ಲೂ ಇತಿಹಾಸ ಪೂರ್ವಕಾಲದಿಂದಲೂ ಆಯುಧೋಪಕರಣಗಳನ್ನು ನಿರ್ಮಿಸಲಾಗುತ್ತಿತ್ತು. ಕ್ರಿ.ಪೂ. 3000ದ ಸುಮಾರಿನಲ್ಲಿ ಪ್ರಾರಂಭವಾದ ನವಶಿಲಾಯುಗ ಕಾಲದಿಂದಲೇ ಕಲಾಭಿರುಚಿಯುಳ್ಳ ವಸ್ತುಗಳ ಸೃಷ್ಟಿಕಾರ್ಯ ಕಾಣಬರುತ್ತದೆ. ವ್ಯವಸ್ಯಾಯ ಮುಖ್ಯ ಕಸುಬಾಗಿದ್ದ ನವಶಿಲಾಯುಗದ ಜನ ತಮ್ಮ ಮಡಿಕೆ ಕುಡಿಕೆಗಳ ಮೇಲೆ ಹಲವು ರೀತಿಯ ಚಿತ್ರಗಳನ್ನು ಬಿಡಿಸಲಾರಂಭಿಸಿದರು. ಆದರೆ ಕ್ರಿ.ಪೂ. 1500ರ ಸುಮಾರಿನಲ್ಲಿ ಸ್ಥಾಪಿತವಾದ ಷಾಂಗ್ ರಾಜವಂಶದ ಕಾಲದಿಂದ ನಿಜವಾಗಿಯೂ ಕಲಾತ್ಮಕವಾದ ವಸ್ತುಗಳು ನಿರ್ಮಿತವಾದುವು. ಅದಕ್ಕೂ ಮೊದಲಿಗೆ ಇತ್ತೆಂದು ಹೇಳಲಾದ ಹ್ಸಿಯಾ ರಾಜ್ಯದ ಕಾಲಕ್ಕೆ ಇಲ್ಲವೆ ಷಾಂಗ್ ಕಾಲಕ್ಕೆ ಸೇರಬಹುದಾದ, ಮೂಳೆಯಲ್ಲಿ ಕೆತ್ತಿದ ವಸ್ತುಗಳು ಗಮನಾರ್ಹ, ಚಿತ್ರಲಿಪಿಯಿಂದ ಕೂಡಿದ ಆ ವಸ್ತುಗಳು ಆ ಕಾಲದ ಸಂಸ್ಕøತಿಯ ಪ್ರಗತಿಪರತೆಯನ್ನು ಸೂಚಿಸುತ್ತದೆ. ರಾಜಮನೆತನದವರ ಸಮಾಧಿಗಳಲ್ಲಿ ದೊರಕಿರುವ ರಥ, ಕುದುರೆ, ಜೀನು, ಆಯುಧ ಮುಂತಾದ ವಸ್ತುಗಳು ಕಲೆಯ ಅಭ್ಯಾಸಕ್ಕೆ ಸಾಧನಗಳಾಗಿವೆ. ಷಾಂಗ್ ಕಾಲಕ್ಕೆ ಸೇರಿದ ಕೆಲವು ಶಿಲ್ಪಗಳು ಅನ್ಯಾಂಗ್‍ನ ಭೂಸಂಶೋಧನೆಗಳಲ್ಲಿ ಸಿಕ್ಕಿವೆ. ಈ ಶಿಲ್ಪಗಳು ಔಪಚಾರಿಕ ಶೈಲಿಯಿಂದ ಕೂಡಿದ ವೈಶಿಷ್ಟ್ಯರಹಿತ ಕೃತಿಗಳಾಗಿವೆ. ಘನಾಕೃತಿಯ ಈ ಶಿಲ್ಪಗಳಲ್ಲಿ ಪ್ರತ್ಯೇಕ ಅಂಗಗಳಿಗೆ ಪ್ರಾಮುಖ್ಯ ನೀಡದೆ ಸಮಗ್ರ ರೂಪದ ಅಂದಕ್ಕೆ ಗಮನವೀಯಲಾಗಿದೆ. ಬಹುಶಃ ಗೂಬೆ ಮತ್ತು ಹುಲಿಯನ್ನು ಹೋಲುವ ಒಂದು ಪ್ರಾಣಿಯ ಶಿಲ್ಪಗಳು ತಾಂತ್ರಿಕ ದೃಷ್ಟಿಯಿಂದ ಉತ್ತಮ ಮಟ್ಟಕ್ಕೆ ಸೇರುತ್ತವೆ. ಅವು ಶಿಲ್ಪಿಗಳ ದೀರ್ಘ ಅನುಭವದ ನಿದರ್ಶನಗಳಾಗಿವೆ. ಗೂಬೆಯ 17 ಎತ್ತರದ ಶಿಲ್ಪದಲ್ಲಿ ಕಿವಿ ಮತ್ತು ಕಣೆÂ್ಣವೆಗಳು ಮನುಷ್ಯನನ್ನು ಹೋಲುತ್ತವೆ. ಕಣ್ಣುಗಳು ಆಳವಾಗಿವೆ; ಕಾಲುಗಳು ದಪ್ಪವೂ ಶಕ್ತಿಯುತವೂ ಆಗಿದೆ. ತಲೆಯ ಭಾಗದ ಮತ್ತು ರೆಕ್ಕೆಗಳ ಗರಿಗಳನ್ನು ಸೂಕ್ಷ್ಮವಾಗಿ ರೂಪಿಸಲಾಗಿದೆ. ಅದರ ಅಂಗಗಳ ಮೇಲೆ ವಿವಿಧ ಪ್ರಾಣಿಗಳನ್ನು ಹೋಲುವ ಆಕಾರಗಳನ್ನು ಕೆತ್ತಲಾಗಿದೆ. ಅದೇ ಕಾಲಕ್ಕೆ ಸೇರಿದ, ಮುಂಗಾಲುಗಳ ಮೇಲೆ ನಿಂತ ಹುಲಿಯ ಶಿಲ್ಪ ಸಹ ಇದೇ ಬಗೆಯದು. ಇಂಥ ಶಿಲ್ಪಗಳನ್ನು ಶುಭಸೂಚಕ ವಸ್ತುಗಳೆಂದು ಪರಿಗಣಿಸಿ ಇವಕ್ಕೆ ಮಂತ್ರಶಕ್ತಿಯನ್ನು ಆರೋಪಿಸಲಾಗಿತ್ತೆಂಬುದನ್ನು ಮೇಲಿನ ಚಿತ್ರಗಳಿಂದಲೂ ಆ ಶಿಲ್ಪಗಳನ್ನು ಸಮಾಧಿಗಳಲ್ಲಿ ಇಟ್ಟಿದ್ದರೆಂಬುದರಿಂದಲೂ ಊಹಿಸಲಾಗಿದೆ.

	ಷಾಂಗ್ ಶಿಲ್ಪಿಗಳು ಮಾನವರೂಪಗಳನ್ನು ಸಹ ಔಪಚಾರಿಕ ಶೈಲಿಯಲ್ಲೇ ನಿರ್ಮಿಸುತ್ತಿದ್ದರು. 5¾" ಎತ್ತರದ ಕುಳಿತ ಮನುಷ್ಯ ವಿಗ್ರಹ ಬೇರಾವುದೋ ವಸ್ತುವಿನ ತಳಭಾಗವಾಗಿದ್ದಿರಬಹುದು. ಚಪ್ಪಟೆಯಾದ ತಲೆಯ ಮೇಲಿರುವ ತಗ್ಗು, ದೇಹದ ಗಾತ್ರ, ಅದರ ಕೆಳಭಾಗದ ವೈಶಾಲ್ಯ, ಮುಂಚಾಚಿರುವ ತಲೆ-ಇವೆಲ್ಲ ಮೇಲಿನ ಊಹೆಗೆ ಸಹಾಯಕವಾಗಿವೆ. ದೇಹಪ್ರಮಾಣಬದ್ಧವಾಗಿ, ದೇಹದ ಮೇಲೆ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಇತರ ಕೆಲವು ಪ್ರಾಣಿಗಳ ಕೆತ್ತನೆಯಲ್ಲಿ ಸಹಜತೆಗೆ ಗಮನ ನೀಡಿಲ್ಲವಾದರೂ ಅದು ಸತ್ತ್ವಪೂರ್ಣವಾದದ್ದು, ತುಂಬುಶರೀರದ ಆನೆ, ಒರಗಿದಂತಿರುವ ನೀರಾನೆ ಇವುಗಳ ಶಿಲ್ಪಗಳು ಬೇರಾವುದೋ ಅಸುರೀಲೋಕದ ಕೃತಿಗಳಂತೆ ಕಾಣುತ್ತವೆ. ನೀರಾನೆಯ ದೇಹದ ಗಾತ್ರ, ಅದರ ಅಂಗಗಳನ್ನು ರೂಪಿಸಿರುವ ಕೌಶಲ ಅಸ್ಖಲಿತವಾದ್ದು, ದೇಹದ ಮೇಲಿನ ರೇಖಾಚಿತ್ರಗಳು ಶಿಲ್ಪದ ಗಾಂಭೀರ್ಯವನ್ನು ಹೆಚ್ಚಿಸಿವೆ.

	ಇವೆಲ್ಲ ಸಣ್ಣ ಗಾತ್ರದ ಕೃತಿಗಳಾದರೂ ಷಾಂಗ್ ಶಿಲ್ಪಿಗಳು ಬೃಹದಾಕಾರದ ಕೃತಿಗಳನ್ನು ನಿರ್ಮಿಸಿದ್ದರಿಂದ ಊಹಿಸಲು ಆಧಾರಗಳಿವೆ. ಉಬ್ಬುಶಿಲ್ಪಿಗಳ ಕೆತ್ತನೆ ಅವರ ವೈಶಿಷ್ಟ್ಯವಾಗಿತ್ತು. ಕಲ್ಲಿನ ಮತ್ತು ಕಂಚಿನ ಪಾತ್ರೆಗಳ ಮೇಲೆ ತಂತ್ರ ದೃಷ್ಟಿಯಿಂದ ಉತ್ತಮವಾದ, ಕಲಾಪೂರ್ಣವಾದ ಉಬ್ಬು ಚಿತ್ರಗಳಿವೆ. ಷಾಂಗ್ ಕಾಲದ ಕಂಚಿನ ಶಿಲ್ಪಗಳು ಚೀನೀ ಕಲೆಯ ಇತಿಹಾಸದಲ್ಲೇ ಆದರ್ಶಯುತವಾದಂಥವು. ಆಗಿನ ಕಲಾವಸ್ತುಗಳ ಸಂಖ್ಯೆಯೂ ಅಧಿಕ. ಬಹಳ ಹಿಂದಿನಿಂದಲೂ ಮರ, ಜೇಡಿಮಣ್ಣು ಮುಂತಾದವುಗಳಿಂದ ಕಲಾವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಇವು ಬೇಗ ನಾಶವಾಗುತ್ತಿದ್ದುವು. ಕ್ರಮೇಣ ಇವನ್ನು ಕಂಚಿನಲ್ಲಿ ನಿರ್ಮಿಸುವ ಪದ್ಧತಿ ಬೆಳೆಯಿತು. ಇವು ನುರಿತ ಕಲೆಗಾರಿಕೆಯ ನಿದರ್ಶನಗಳು.

	ಷಾಂಗ್ ಕಾಲದ ಕಂಚಿನ ಶಿಲ್ಪಕಲೆ ಅನಂತರದ ಚೌ ವಂಶದ ಪ್ರಾರಂಭಕಾಲದಲ್ಲೂ ಮುಂದುವರಿದುದರಿಂದ ಇವೆರಡೂ ಕಾಲದ ಶಿಲ್ಪಗಳನ್ನು ಪ್ರತ್ಯೇಕಿಸುವುದು ಕಷ್ಟಸಾಧ್ಯ. ಒಂದೆರಡು ತಲೆಮಾರುಗಳ ಕಾಲದಲ್ಲಿ ಚೌ ಕಾಲದ ವಿಶಿಷ್ಟ ಶೈಲಿ ರೂಪುಗೊಂಡಿತು. ಷಾಂಗ್ ಕಂಚಿನ ಶಿಲ್ಪಗಳು ಸರಳ ಸೌಮ್ಯವಾಗಿದ್ದರೆ ಚೌ ಶಿಲ್ಪಗಳು ಸತ್ವಪೂರ್ಣವೂ ಚಲನಾತ್ಮಕವೂ ಆದಂಥವು. ಕ್ರಮೇಣ ಈ ಲಕ್ಷಣಗಳು ಕಣ್ಮರೆಯಾಗಿ, ಉಪಯುಕ್ತ ಆಲಂಕಾರಿಕ ಶೈಲಿ ಪ್ರಧಾನವಾಯಿತು. ಪ್ರಾಣಿಶಿಲ್ಪಗಳು ಅಸಹಜವಾಗಿ ಕಾಲ್ಪನಿಕ ರೂಪಗಳು ಹೆಚ್ಚಿದುವು. ಈ ಕಾಲಕ್ಕೆ ಸೇರಿದ ಹುಲಿಜೋಡಿಯ ಶಿಲ್ಪಗಳು ಪ್ರಾತಿನಿಧಿಕ ನಿದರ್ಶನಗಳೆಂದು ಗಣಿಸಬಹುದು. ಬೇರಾವುದೋ ವಸ್ತುಗಳ ಆಧಾರಗಳಾಗಿ ಉಪಯೋಗಿಸಿದಂತಿರುವ ಪ್ರಾಣಿಶಿಲ್ಪಗಳಿಗೆ ಶಕ್ತಿಯುತ ಸದೃಢ ದೇಹಗಳುಂಟು. ಮೊದಲಿನ ಶಿಲ್ಪಗಳ ನೈಜತೆ ಕಾಣದಾಗಿ ಇವುಗಳಲ್ಲಿ ಸಾಂಪ್ರದಾಯಿಕ ಸಮನ್ವಯ ಶೈಲಿ ಎದ್ದು ಕಾಣುತ್ತದೆ. ಹುಲಿಯ ದೌಷ್ಟ್ಯವನ್ನು ನಿರೂಪಿಸುವ ಯತ್ನದಲ್ಲಿ ಅವುಗಳ ವೈಯಕ್ತಿಕತೆ ನಷ್ಟವಾಗಿದೆ. ಆದರೆ ದೇಹದ ಮೇಲಿರುವ ರೇಖಾಚಿತ್ರಗಳಲ್ಲಿ ಅದರ ದುಷ್ಟಗುಣ ಅತ್ಯಂತ ಪ್ರಭಾವಶಾಲಿಯಾಗಿ ನಿರೂಪಿತವಾಗಿದೆ.

	ಚೌ ಯುಗದ ಮಧ್ಯಕಾಲದ (ಕ್ರಿ.ಪೂ. 950-750) ಕೆಲವು ಕೃತಿಗಳಲ್ಲಿ ಪರಂಪರಾಗತ ಲಕ್ಷಣಗಳಿಗಿಂತ ಹೊರಗಿನ ಪ್ರಭಾವಗಳು ಪ್ರಧಾನವಾಗಿದೆ. ಅನಂತರ ಕಾಲದ ಕಂಚಿನ ಶಿಲ್ಪಗಳ ಮೇಲೆ (ಕ್ರಿ.ಪೂ. 600-249) ಭಯೋತ್ಪಾದಕ ಚಿತ್ರಗಳ ಬದಲು ಕ್ರೀಡಾಸಕ್ತಿಯನ್ನು ಸೂಚಿಸುವ ಚಿತ್ರಗಳು ಪ್ರಧಾನ. ಮೊದಲು ಧಾರ್ಮಿಕ ಮಾಂತ್ರಿಕ ನಿರೂಪಣೆಗಳು ಅಧಿಕವಾಗಿದ್ದುವು. ಅನಂತರದ ಕಾಲದಲ್ಲಿ ಸಾಮಾಜಿಕ ದೃಶ್ಯಗಳಿಗೆ, ತಾಂತ್ರಿಕ ಕೌಶಲಕ್ಕೆ ಗಮನ ಸಂದಿತು.

	ಕ್ರಿ.ಪೂ. 6ನೆಯ ಶತಮಾನದಲ್ಲಿ ಸಂಭವಿಸಿದ ರಾಜಕೀಯ ಸಾಮಾಜಿಕ ಆಂದೋಲಗಳಿಂದ ಉಂಟಾದ ಪರಿಸ್ಥಿತಿಯಲ್ಲಿ ಕಾನ್‍ಫ್ಯೂಷಸನ ಬೌದ್ಧಿಕ-ನೈತಿಕವಾದ ಮತ್ತು ಲೌ-ಟ್ಜುವಿನ ಟೌ ಮತದ ಧ್ಯಾನಕರ್ಮರಹಿತ ವಿರಕ್ತಿವಾದಗಳ ನಡುವೆ ಗೊಂದಲ ಏರ್ಪಟ್ಟಿತು. ಇದರ ಪ್ರಭಾವ ಚೀನದ ಶಿಲ್ಪಕ್ಷೇತ್ರದಲ್ಲೂ ಕಂಡುಬರುತ್ತದೆ. ಆಗ ದೇಶಾದ್ಯಂತ ಶ್ರೀಮಂತ ಮನೆತನಗಳವರು ಪ್ರಬಲವಾಗಿದ್ದರು. ಚಿನ್ನ-ಬೆಳ್ಳಿ ಕೆತ್ತನೆಗಳಿಂದ ಕೂಡಿದ ಕಂಚು, ಪಚ್ಚೆಕಲ್ಲು ಮತ್ತು ಅರಗಿನ ಶಿಲ್ಪಗಳ ತಯಾರಿಕೆಗೆ ಅವರಿಂದ ಅಧಿಕ ಬೇಡಿಕೆಯಿತ್ತು. ಮೆರಗಿನಿಂದ ಕೂಡಿದ ಕಂಚಿನ ಕನ್ನಡಿಗಳ ಹಿಂಭಾಗದಲ್ಲಿ ಕಂಚಿನ ಶಿಲ್ಪಗಳ ಮಾದರಿಯ ಉಬ್ಬುಶಿಲ್ಪಗಳನ್ನು ಕೆತ್ತಲಾಗುತ್ತಿತ್ತು. ಕಂಚಿನ ಪಾತ್ರೆಗಳ ಮೇಲಿನ ಉಬ್ಬು ಶಿಲ್ಪಗಳ ತಾಂತ್ರಿಕ ನೈಪುಣ್ಯ ಉನ್ನತ ಮಟ್ಟ ತಲುಪಿತ್ತು. ಕುಸುರಿ ಕೆಲಸದಲ್ಲಿ ಶಿಲ್ಪಿಗಳು ಪರಸ್ಪರ ಸ್ಪರ್ಧಿಸುತ್ತಿದ್ದಿರಬೇಕು. ಸೈಬೀರಿಯದ ಸಿಥಿಯನರ ಪ್ರಾಣಿಚಿತ್ರಣ ಕಲೆಯ ಪ್ರಭಾವ ಈ ಕಾಲದಲ್ಲಿ ಚೀನವನ್ನು ತಲುಪಿದಂತೆ ತೋರುತ್ತದೆ. ಉತ್ತರಕಾಲೀನ ಚೌ ವಂಶದ ಅನೇಕ ಕಂಚಿನ ಶಿಲ್ಪಗಳು ಹೇರಳವಾಗಿ ದೊರಕಿವೆ. ಕ್ರಿ.ಪೂ. 6-3ನೆಯ ಶತಮಾನಗಳ ಈ ಶಿಲ್ಪಗಳಲ್ಲಿ ಬೇಟೆಯ ದೃಶ್ಯಗಳನ್ನು ಹಾಗೂ ಧಾರ್ಮಿಕ ಮತ್ತು ಮಾಂತ್ರಿಕ ವಿಷಯಗಳನ್ನು ರೂಪಿಸಲಾಗಿದೆ. ಆಗಿನ ಚಿತ್ರಕಲೆಯ ಪ್ರಭಾವಗಳನ್ನು ತೋರುವ ಈ ಶಿಲ್ಪಗಳು ಸಣ್ಣವಾದರೂ ಗಮನಾರ್ಹ. ಒಂದು ಕಂಚಿನ ಶಿಲ್ಪದ ಮೇಲೆ ಸಾಂಪ್ರದಾಯಿಕ ಡ್ರೇಗನ್ ಕೆತ್ತನೆ ಇದೆ. ಲೋಯಾಂಗ್ ಬಳಿಯ ಚಿನ್-ಟ್ಸುನ್ ಎಂಬಲ್ಲಿ ಹಾನ್ ವಂಶದ ಪ್ರಾಂತ್ಯಾಧಿಕಾರಿಗಳ ಸಮಾಧಿಗಳಲ್ಲಿ ಕುದುರೆಗಳ ಮತ್ತು ಮಾನವರ ಕಂಚಿನ ಪ್ರತಿಮೆಗಳು ದೊರಕಿವೆ. ಅದೇ ಕಾಲಕ್ಕೆ ಸೇರಿದ ಈ ಶಿಲ್ಪಗಳು ಸರಳವಾಗಿಯೂ ದುಂಡಗೂ ಇವೆ. ಕೆಲವು ಶಿಲ್ಪಗಳಲ್ಲಿ ಎಚ್ಚರಿಕೆಯಿಂದಲೂ ಕೌಶಲದಿಂದಲೂ ದೇಹವನ್ನು ರೂಪಿಸಲಾಗಿದೆ. ಮಾನವ ಶಿಲ್ಪಗಳಲ್ಲಿ ಬಹು ಸಂಖ್ಯೆಯವು ಕುಳಿತಂತೆಯೋ ಮೊಳಕಾಲೂರಿ ನಿಂತಂತೆಯೋ ಇವೆ. ತೆರೆದ ಬಾಹುಗಳು ಬರಿದಾದ ಪಾತ್ರೆಯೊಂದನ್ನು ಹಿಡಿದಿವೆ. ಆ ಶಿಲ್ಪಗಳ ಕೆಳಭಾಗದಲ್ಲಿರುವ ರಂಧ್ರಗಳಿಂದ ಅವನ್ನು ಬೇರಾವುದೋ ವಸ್ತುವಿಗೆ ಜೋಡಿಸಿದ್ದಂತೆ ಕಾಣುತ್ತದೆ. ಕೆಲವು ಶಿಲ್ಪಗಳ ತಲೆಗಳು ದೊಡ್ಡವು. ಮುಖ ಚಪ್ಪಟೆ. ಆದ್ದರಿಂದ ಅವು ಮುಂಗೋಲಿಯನ್ ಬುಡಕಟ್ಟಿನ ಜನರನ್ನು ಪ್ರತಿನಿಧಿಸುತ್ತಿರಬಹುದು. ಅಂಗವಸ್ತ್ರಗಳ ನಿರೂಪಣೆ ಅಸಹಜವಾಗಿದ್ದರೂ ಪ್ರಮಾಣಬದ್ಧವೂ ಸುಲಲಿತವೂ ಪರಿಣಾಮಕಾರಿಯೂ ಆದ್ದು. ಚಲನಾತ್ಮಕವೂ ಸತ್ತ್ವಪೂರ್ಣವೂ ಆದ, ಕುಸ್ತಿ ಪಟುಗಳ ಶಿಲ್ಪಗಳೂ ಉಂಟು. ಇವು ಕೌಶಲಪೂರಿತ; ಶಿಲ್ಪಿಗಳ ಪ್ರೌಢಿಮೆಗೆ ಸಾಕ್ಷೀಭೂತ. ಇವುಗಳಲ್ಲಿ ಹೆಚ್ಚಿನವು ಸತ್ತವರ ಆತ್ಮಗಳ ತೃಪ್ತಿಗಾಗಿ ಸಮಾಧಿಗಳಲ್ಲಿ ಹೂತಿಡಲು ನಿರ್ಮಿಸಿದವು.

	ಅದೇ ಕಾಲಕ್ಕೆ ಸೇರಿದ ಮರದ ಶಿಲ್ಪಗಳು ಹೂನಾನ್ ಪ್ರಾಂತ್ಯದ ಚಾಂಗ್‍ಷಾದಲ್ಲಿ ದೊರಕಿವೆ. ಇವು ಚೀನದ ಇತರ ಪ್ರದೇಶಗಳ ಶಿಲ್ಪಗಳಿಗಿಂತ ಬಹಳ ಭಿನ್ನವಾದಂಥವು. ಉದ್ದ ನಾಲಗೆಗಳೂ ಜಿಂಕೆಯ ಕೊಂಬುಗಳೂ ಉಳ್ಳ ಮುಖಗಳ, ವರ್ಣಲೇಪಿತವಾದ ಈ ಶಿಲ್ಪಗಳು ಚೌ ವಂಶದ ಕೊನೆಯ ಕಾಲದಲ್ಲಿ ಒಂದು ಹೊಸ ಶೈಲಿಯನ್ನು ಸೃಷ್ಟಿಸಿದುವು. ವಿಶಾಲವೂ ಸಂಪದ್ಭರಿತವೂ ಆದ ಚು ರಾಜ್ಯದ ಆಶ್ರಯದಲ್ಲಿ ಈ ಶೈಲಿ ಬೆಳೆದು ಬಂತು. ಸಮಾಧಿಗಳಲ್ಲಿ ಹೂತಿಡಲೆಂದೇ ನಿರ್ಮಿಸಿದ ಈ ಮಾನವ ಶಿಲ್ಪಗಳು 8' ಎತ್ತರವಾಗಿವೆ; ಇವಕ್ಕೆ ಚಪ್ಪಟೆಯಾದ ತಲೆ, ಮುಖ, ವರ್ಣಮಯ ಕಣ್ಣುಗಳು ಚೂಪಾದ ಗಡ್ಡ ಇವೆ; ಕಣ್ಣುಗಳನ್ನು ಬಣ್ಣಗಳಿಂದ ಚಿತ್ರಿಸಲಾಗಿದೆ. ಸರಳ ಸಹಜ ಕತ್ತನೆ. ಈ ಶೈಲಿ ಕೆಲವು ಬದಲಾವಣೆಗಳಿಂದ ಮುಂದಿನ ಹಾನ್ ವಂಶದ ಕಾಲದವರೆಗೂ ಉಳಿದು ಬಂತು.

	ಹಾನ್ ವಂಶದ ಕಾಲದ ಶಿಲ್ಪಗಳು ಮುಖ್ಯವಾಗಿ ಸಮಾಧಿಗಳಲ್ಲಿ ದೊರಕಿವೆ. ಮರ, ಇಟ್ಟಿಗೆ, ಹೆಂಚು ಅಥವಾ ಕಲ್ಲಿನಲ್ಲಿ ನಿರ್ಮಿತವಾದ ಸಮಾಧಿಗಳ ಗೋಡೆಗಳ ಒಳಮುಖದಲ್ಲಿ ಗಾರೆಯ ಗಿಲಾವು ಮಾಡಿ ಅದರ ಮೇಲೆ ಭಿತ್ತಿಚಿತ್ರಗಳನ್ನು ಬಿಡಿಸಲಾಗಿದೆ. ಸಮಾಧಿಯ ಬಳಿಗೆ ಒಯ್ಯುವ ಮಾರ್ಗದ ಪಾಶ್ರ್ವಗಳಲ್ಲಿನ ಕಲ್ಲಿನ ಶಿಲ್ಪಗಳನ್ನು ಸಾಲಾಗಿ ಇಡಲಾಗಿತ್ತು. ಸಮಾಧಿಗಳ ಬಳಿ ಬಲಿಸಮರ್ಪಣೆಗಾಗಿ ಸ್ಮಾರಕ ಗುಡಿಗಳನ್ನು ನಿರ್ಮಿಸಲಾಗುತ್ತಿತ್ತು. ಅಂಥ ಗುಡಿಗಳ ಗೋಡೆಗಳು ಶಿಲ್ಪಗಳಿಂದ ಅಲಂಕೃತವಾಗಿರುತ್ತಿದ್ದುವು. ಹಾನ್ ವಂಶದ ಪ್ರಾರಂಭಕಾಲದಿಂದ ಷೆನ್‍ಸೀ ಬಳಿಯಲ್ಲಿ ಉಳಿದುಬಂದಿರುವ ದಳಪತಿ ಹೋ-ಚು-ಷಿಂಗ್‍ನ ಸಮಾಧಿಗೆ ಸಂಬಂಧಿಸಿದ. ಶಿಲ್ಪಗಳಲ್ಲಿ (ಕ್ರಿ.ಪೂ. 117). ಪ್ರಸಿದ್ಧವಾದದ್ದು ಗಾಯಗೊಂಡು ಬಿದ್ದಿರುವ ಯೋಧನ ಮೇಲೆ ನಿಂತ ಸದೃಢವಾದ ಕುದುರೆಯ ಶಿಲ್ಪ. ಯೋಧನ ಎಡಗೈಯಲ್ಲಿ ಬಿಲ್ಲೂ ಬಲಗೈಯಲ್ಲಿ ಕುದುರೆಗೆ ತಿವಿಯುತ್ತಿರುವ ಸಣ್ಣ ಭರ್ಜಿಯೂ ಇವೆ. ಹಾನ್ ದೊರೆಗಳು ನೆರೆಹೊರೆಯ ಅನಾಗರಿಕ ಶತ್ರುಗಳನ್ನು ಕುದುರೆ ಸೈನ್ಯದ ಸಹಾಯದಿಂದ ಸೋಲಿಸಿದ್ದರ ಸ್ಮಾರಕವಾಗಿ ಇಂಥ ಶಿಲ್ಪಗಳನ್ನು ನಿರ್ಮಿಸಿರಬಹುದು. ಅದೇ ಪರಿಸರದಲ್ಲಿ ಬಂಡೆಗಳ ಮೇಲೆ ಕೆತ್ತಲಾದ ಮತ್ತೆರಡು ಕುದುರೆಗಳ ಶಿಲ್ಪಗಳುಂಟು. ಒರಗಿದ ನೀರಾನೆ, ಜಿಗಿಯಲುದ್ಯುಕ್ತವಾದ ಹುಲಿ, ಬೇಟೆಯನ್ನು ಕಬಳಿಸುತ್ತಿರುವ ಕೋಣನಾಕಾರದ ದೈತ್ಯಪ್ರಾಣಿ, ಕರಡಿಯೊಂದನ್ನು ಅಪ್ಪಿ ಹಿಡಿದು ಕಚ್ಚುತ್ತಿರುವ ರಾಕ್ಷಸ ಮುಂತಾದವು ಅಲ್ಲಿರುವ ಉಬ್ಬು ಶಿಲ್ಪಗಳು. ಇವುಗಳಲ್ಲಿ ಅಷ್ಟೇನೂ ಸಹಜತೆಯಿಲ್ಲ. ಇವು ಉತ್ತಮ ಕಲಾಕೃತಿಗಳಲ್ಲ. ಇವು ಪಾಶ್ಚಾತ್ಯ ಪ್ರದೇಶಗಳಿಂದ ಪ್ರವೇಶಿಸಿದ ನೂತನ ಪ್ರಭಾವಗಳ ಫಲವಿರಬಹುದೆಂದು ಊಹಿಸಲಾಗಿದೆ. ವಿಚಿತ್ರ ಹಾಗೂ ದುಷ್ಟ ಶಕ್ತಿಗಳ ಸಮೂಹದಂತೆ ಕಾಣುವ ಈ ಶಿಲ್ಪಗಳ ವಸ್ತು ಬಹುಶಃ ಪಾರಲೋಕಿಕವಾದ್ದು.

	ಅನಂತರ ಕಾಲದ ಹಾನ್ ಶಿಲ್ಪಗಳು, ಮುಖ್ಯವಾಗಿ ಕ್ರಿ.ಶ. 2-3ನೆಯ ಶತಮಾನಗಳ ಶಿಲ್ಪಗಳು, ಹೆಚ್ಚು ಸಂಖ್ಯೆಯಲ್ಲಿ ಉಳಿದುಬಂದಿವೆ. 5ನೆಯ ಶತಮಾನದಿಂದ ಬೌದ್ಧಮತದ ಪ್ರಸಾರ ಹೆಚ್ಚಿದಂತೆ ಕಲ್ಲಿನ ಶಿಲ್ಪಗಳು ಹೆಚ್ಚಾಗಿ ನಿರ್ಮಾಣವಾದುವು.

	ಹೋನ್ಯಾನ್, ಷ್ಯಾನ್‍ಟಿಂಗ್ ಮತ್ತು ಸಚ್‍ವಾನ್ ಪ್ರದೇಶಗಳಲ್ಲಿ ಸ್ಮಶಾನದ ಪ್ರಾಕಾರದಿಂದ ಸ್ಮಶಾನಗುಡ್ಡದ ಬಳಿಗೆ ಒಯ್ಯುವ ಪ್ರೇತಮಾರ್ಗಗಳ ಆರಂಭದಲ್ಲಿ ನೆಡುತ್ತಿದ್ದ ಕಂಬಗಳು ಗಮನಾರ್ಹ. ಸಚ್‍ವಾನ್ ಪ್ರಾಂತ್ಯದ ಚು-ಹ್ಸಿಯೆನ್‍ನಲ್ಲಿರುವ ಷೆನ್ ಎಂಬ ಅಧಿಕಾರಿಯ ಸಮಾಧಿಯ ಮುಂದಿರುವ ಕಂಬಗಳ ಮೇಲೆ ಸುಂದರವಾದ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಬಹುಶಃ 2ನೆಯ ಶತಮಾನಕ್ಕೆ ಸೇರಿದ ಈ ಕಂಬಗಳ ಮೇಲಿರುವ ಹುಲಿ, ದೈತ್ಯ ಪ್ರಾಣಿ ಮತ್ತು ಫೀನಿಕ್ಸ್ ಪಕ್ಷಿಗಳ ಕೆತ್ತನೆಗಳು ತೆಳುವಾದ ಉಬ್ಬುಚಿತ್ರಗಳು. ಇತರ ಕೆಲವು ಕೆತ್ತನೆಗಳೂ ಪ್ರಮುಖವಾಗಿವೆ. ಆದರೂ ಇವು ಕೆಲವು ಶತಮಾನಗಳಷ್ಟು ಹಿಂದಿನ ಚೌ ವಂಶದ ಶಿಲ್ಪಗಳಷ್ಟು ಕಲಾತ್ಮಕವಾಗಿಲ್ಲ. ಅದೇ ಕಾಲದ ಕಂಚಿನ ಕರಡಿಯ ಶಿಲ್ಪಗಳು ಕಲಾಪೂರ್ಣ ಮತ್ತು ಜೀವಂತ. ಇತರ ಕಂಚಿನ ಪ್ರಾಣಿಶಿಲ್ಪಗಳು ಚೀನೀಯರಲ್ಲಿ ಬಹಳ ಜನಪ್ರಿಯವಾಗಿದ್ದಂತೆ ಕಾಣುತ್ತದೆ. ಸಮಾಧಿಗಳಲ್ಲಿಡಲು ಪಚ್ಚೆಕಲ್ಲಿನಲ್ಲಿ (ಜೇಡ್) ಮತ್ತು ಜೇಡಿಮಣ್ಣಿನಲ್ಲಿ ಸಹ ಇಂಥ ಶಿಲ್ಪಗಳನ್ನು ಮಾಡಲಾಗುತ್ತಿತ್ತು.

	ಕಲ್ಲಿನ ದೊಡ್ಡ ಸಿಂಹಗಳ ಶಿಲ್ಪಗಳು ಷಾಂಟುಗ್‍ನ ವಂಶದ ದೇವಾಲಯಗಳಲ್ಲಿವೆ. ಅವುಗಳ ಕಾಲ 117. ಬಹುಶಃ ಹೊರಗಿನ ಪ್ರಭಾವದಿಂದಾಗಿ ಈ ಕೃತಿಗಳಲ್ಲಿ ನೈಜತೆ ಇಲ್ಲ. ಜಿಯಾಂಗ್‍ಸೂ ಪ್ರಾಂತ್ಯದ ನ್ಯಾನ್‍ಕಿಂಗ್ ಮತ್ತು ಟ್ಯಾನ್‍ಯಾಂಗ್‍ಗಳಲ್ಲಿ ಬೃಹತ್ತಾದ ರೆಕ್ಕೆಗಳಿರುವ ನಿಂತ ಸಿಂಹಗಳ ಶಿಲ್ಪಗಳುಂಟು. 5-6ನೆಯ ಶತಮಾನಗಳ ಈ ಶಿಲ್ಪಗಳು ಸತ್ತ್ವಪೂರ್ಣ, ನೈಜ, ಕುಶಲ ನಿರ್ಮಾಣಗಳು, ಸಿಂಹದ ಮುಖ, ಆಡಿನ ದೇಹ ಮತ್ತು ಸರ್ಪದ ಬಾಲವುಳ್ಳ ಕೈಮೀರ ಪ್ರಾಣಿಶಿಲ್ಪಗಳು ಗಮನಾರ್ಹ, ಕ್ರಿ.ಪೂ. 3-2ನೆಯ ಸಹಸ್ರಮಾನಗಳಿಂದ ಮೆಸಪೋಟೇಮಿಯದಲ್ಲಿ ರೂಢಿಯಲ್ಲಿದ್ದ ಈ ಪ್ರಾಣಿಗಳ ನಿರೂಪಣೆ ಕ್ರಮೇಣ ಮಧ್ಯ ಏಷ್ಯದ ಮಾರ್ಗವಾಗಿ ಚೀನಕ್ಕೆ ಬಂದಿರಬಹುದು. ಸಿಂಹ ಮತ್ತು ಕೈಮೀರ ಪ್ರಾಣಿಗಳ ಚಿತ್ರಣ 6ನೆಯ ಶತಮಾನದ ಅನಂತರ ಕಾಣುವುದಿಲ್ಲ.

	ಅನಂತರ ಕಾಲದಲ್ಲಿ ಚೀನದ ಆಡಳಿತ ಅಸ್ತವ್ಯಸ್ತವಾಗಿ ದೇಶದಲ್ಲೆಲ್ಲ ಅನಾಯಕ ಪರಿಸ್ಥಿತಿ ತಲೆದೋರಿತು. ಅಂತರ್ಯುದ್ಧದಲ್ಲಿ ನಿರತರಾದ ಕೆಲವು ಚೀನೀನಾಯಕರೂ ಅನಾಗರಿಕ ಜನರೂ ದೇಶದ ಪ್ರಭುತ್ವಕ್ಕಾಗಿ ಹೊಡೆದಾಡುತ್ತಿದ್ದಾಗ, ಕಲೆ ಮೂಲೆಗುಂಪಾದದ್ದು ಸಹಜ. ಆದರೆ 5ನೆಯ ಶತಮಾನದ ವೇಳೆಗೆ ಭಾರತದಿಂದ ಬೌದ್ಧಧರ್ಮ ಮತ್ತು ಕಲೆಗಳು ಚೀನವನ್ನು ಪ್ರವೇಶಿಸಿ, ಅನಾಯಕತ್ವದಿಂದ ಬೇಸತ್ತ ಜನತೆಗೆ ಹೊಸ ಆಕರ್ಷಣೆ ಒದಗಿಸಿದುವು. ಮಧ್ಯ ಏಷ್ಯದ ಮೂಲಕ ಭಾರತ-ಚೀನಗಳ ಮಧ್ಯೆ ಏರ್ಪಟ್ಟ ಸಾಂಸ್ಕøತಿಕ ಸಂಪರ್ಕಗಳು ಉತ್ತರದಲ್ಲಿ ತಕ್ಲಮಕಾನ್ ಮರಳುಗಾಡಿನ ಮಾರ್ಗವಾಗಿಯೂ ದಕ್ಷಿಣದಲ್ಲಿ ಕೋಟಾನ್ ಮತ್ತು ಕುಚ ಮಾರ್ಗವಾಗಿಯೂ ಚೀನವನ್ನು ಪ್ರವೇಶಿಸಿದುವು. ಮತ್ತೆ ಭೂಮಾರ್ಗವಾಗಿ ಬಂದ ಭಾರತದ ನೇರ ಪ್ರಭಾವಗಳೂ ಆಗ್ನೇಯ ಏಷ್ಯದ ಫೊನಾನ್ ಮಾರ್ಗವಾಗಿ ಬಂದ ಪ್ರಭಾವಗಳೂ ದಕ್ಷಿಣ ಮತ್ತು ಮಧ್ಯಚೀನದಲ್ಲಿ ಪ್ರಬಲವಾದವು.

	5ನೆಯ ಶತಮಾನದ ಪೂರ್ವಾರ್ಧಕ್ಕೆ ಸೇರುವ (437) ಧ್ಯಾನಿಬುದ್ಧನ ವಿಗ್ರಹ ಮೊದಲ ಚೀನೀ ಬೌದ್ಧ ಕಲೆಯ ನಿದರ್ಶನ. ಚೀನೀ ಪದ್ಥತಿಯಂತೆ, ದೇಹಕ್ಕೆ ಹೊಂದಿಕೊಂಡ ಉಡುಪನ್ನು ಪದರಪದರವಾಗಿ ರೂಪಿಸಲಾಗಿದೆ. ಆದರೆ ಶಿಲ್ಪದಲ್ಲಿ ಸ್ವಾಭಾವಿಕ ಚಲನೆಯಿಲ್ಲ. ಪದ್ಮಾಸನದಲ್ಲಿರುವ ದೇಹದ ತಳಭಾಗ ಸ್ತೂಪವನ್ನು ಹೋಲುವ ಶಿರೋಭಾಗಕ್ಕೆ ಆಧಾರವಾದಂತೆ ಕಾಣುತ್ತದೆ.

	ಬೌದ್ಧ ಧರ್ಮದ ವಿರುದ್ಧ 444ರಲ್ಲಿ ನಡೆದ ತೀವ್ರ ಆಂದೋಲನದ ಫಲವಾಗಿ ಆವರೆಗಿನ ಧಾರ್ಮಿಕ ಕಲಾವಸ್ತುಗಳು ನಾಶವಾದುವು. 452ರಲ್ಲಿ ಅಧಿಕಾರಕ್ಕೆ ಬಂದ, ವೇಯ ಟೊ-ಪ ವಂಶದ ಅರಸರು ಬೌದ್ಧ ಧರ್ಮದ ಅನುಯಾಯಿಗಳಾಗಿದ್ದರಿಂದ ಈ ವಿನಾಶಕಾರಿ ಕೃತ್ಯಗಳು ನಿಂತವು. ಅವರ ಆಶ್ರಯದಲ್ಲಿ 35 ವರ್ಷಗಳ ಕಾಲ ಸತತವಾಗಿ ಸಾವಿರಾರು ಕೆಲಸಗಾರರು ಉತ್ತರ ಷೆನ್‍ಸೀ ಪ್ರಾಂತ್ಯದ ಯುನ್-ಕಾಂಗ್ ಬಳಿ ಇರುವ ಮರಳ್ಗಲ್ಲು ಗುಡ್ಡಗಳಲ್ಲಿ ದುಡಿದು 20 ವಿಶಾಲ ಮತ್ತು ಅನೇಕ ಸಣ್ಣ ಗುಹಾಂತರ್ದೇವಾಲಯಗಳನ್ನು ನಿರ್ಮಿಸಿದರು. ಪೌರಸ್ತ್ಯ ದೇಶಗಳಲ್ಲಿಯ ಅದ್ಭುತ ಕಲಾಕೃತಿಗಳ ಶ್ರೇಣಿಗೆ ಸೇರಿದ ಈ ಮಂದಿರಗಳು ಆಫ್ಘಾನಿಸ್ತಾನ ಮಧ್ಯ ಏಷ್ಯಗಳ ಮಾರ್ಗವಾಗಿ ಭಾರತದಿಂದ ಚೀನಕ್ಕೆ ಪ್ರವೇಶಿದ ಪ್ರಭಾವಗಳ ಫಲವೆನ್ನಬಹುದು.

	ಇಲ್ಲಿ 20ನೆಯ ಗುಹೆಯಲ್ಲಿರುವ ಬೃಹತ್ ಬುದ್ಧ ವಿಗ್ರಹ ಅಪೂರ್ವ ಕಲಾಕೃತಿ. ಪದ್ಮಾಸನಸ್ಥ ಬುದ್ಧ ಧ್ಯಾನಮುದ್ರೆಯಲ್ಲಿದ್ದಾನೆ. ಸಮತೋಲನವಾದ ದೇಹ ಅಂತಶ್ಯಕ್ತಿಯನ್ನು ಸೂಚಿಸುತ್ತದೆ. ಸೌಮ್ಯ ಮುಖ. ನಸುನಗು ಆ ಮೂರ್ತಿಯ ಸೌಂದರ್ಯವನ್ನು ಹೆಚ್ಚಿಸಿವೆ. ದೇಹದ ಮೇಲಿನ ಉಡುಪು ಭಾರತೀಯ ಮಾದರಿಯಲ್ಲಿ ಅಲೆಅಲೆಯಾಗಿ ರೂಪಿತವಾಗಿಲ್ಲ; ಉಪವೀತದ ರೀತಿಯಲ್ಲಿ ಧರಿಸಿದ ಮೇಲುಡುಗೆಯ ಕೊನೆಗಳನ್ನು ಬೆಂಕಿಯ ಜ್ವಾಲೆಗಳಂತೆ ತೋರಿಸಲಾಗಿದೆ. ಅನಂತರ ಕಾಲದ ಕಂಚಿನ ಬುದ್ಧವಿಗ್ರಹಗಳಿಗೆ ಇದು ಮಾದರಿಯಾಯಿತು. 477ಕ್ಕೆ ಸೇರಿದ ಮೈತ್ರೇಯನ ಕಂಚಿನ ವಿಗ್ರಹಗಳಲ್ಲಿ ಕಾಣುವ ನೈಜತೆ ಮತ್ತು ಚಲನೆ ಗಮನಾರ್ಹ. ಯುದ್ಧಗಳಿಂದಾಗಿ ಕ್ಯಾನ್ಸೂ ಪ್ರದೇಶದಿಂದ ವೇ ರಾಜಧಾನಿಯಾದ ಪಿಂಗ್-ಚೆಂಗ್‍ಗೆ ವಲಸೆ ಬಂದ ಶಿಲ್ಪಿಗಳು ಇದರ ಬೆಳೆವಣಿಗೆಗೆ ಕಾರಣವಾಗಿರಬಹುದು.

	ಕ್ರಮೇಣ ಈ ಶೈಲಿಯ ಸಹಜತೆ ಮಾಯವಾಗಿ ಜ್ಯಾಮಿತಿಯ ನಕ್ಷೆಗಳು ಕಂಡುಬರುತ್ತವೆ. 5ನೆಯ ಶತಮಾನಗಳ ವೇಳೆಗೆ ಗ್ರೀಸ್, ಗಾಂಧಾರ, ಇರಾನ್, ಭಾರತ, ಮಧ್ಯ ಏಷ್ಯ ಪ್ರದೇಶಗಳಿಂದ ಚೀನಕ್ಕೆ ಪ್ರವೇಶಿಸಿದ ಪ್ರಾದೇಶಿಕ ಶೈಲಿಗಳ ಮಿಲನದಿಂದ ಚೀನದ ಹೊಸ ಶೈಲಿಯ ಉಗಮವಾಯಿತು.

	ಯುನ್-ಕಾಂಗ್‍ನ 6ನೆಯ ಗುಹೆಯಲ್ಲಿ ಅಧಿಕ ಸಂಖ್ಯೆಯ ಮತ್ತು ಸುವ್ಯವಸ್ಥಿತ ಶಿಲ್ಪಸಮೂಹಗಳುಂಟು. ಅವುಗಳ ಕಾಲ ಸು. 491. ಹೊರಭಾಗದ ಪ್ರಾಕಾರಗಳ ಗೋಡೆಗಳಲ್ಲಿರುವ ಗೂಡುಗಳಲ್ಲಿ ಕುಳಿತ ಅಥವಾ ನಿಂತ ಬುದ್ಧವಿಗ್ರಹಗಳಿವೆ. ಅವನ್ನು ಸುತ್ತುವರಿದು ಬೋಧಿಸತ್ತ್ವ, ಗಂಧರ್ವ, ಅಪ್ಸರೆಯರನ್ನು ಕೆತ್ತಲಾಗಿದೆ. ಕೆಳಭಾಗದ ಚಿತ್ರಪಟ್ಟಿಕೆಯಲ್ಲಿ ಗೌತಮ ಬುದ್ಧನ ಜೀವಿತದ ಕೆಲವು ಘಟನೆಗಳನ್ನು ಚಿತ್ರಿಸಲಾಗಿದೆ. ಸರಳ ಸತ್ತ್ವಪೂರ್ಣ ನಿರೂಪಣೆಯಿಂದ ಇವು ಚೀನದ ಬೌದ್ಧ ಶಿಲ್ಪಕಲೆಯ ಆರಂಭ ಕಾಲದ ಕೃತಿಗಳಲ್ಲಿ ಅಪೂರ್ವ ಸ್ಥಾನ ಪಡೆದಿವೆ. ವೇ ಕಾಲದ ಧಾರ್ಮಿಕ ಶಿಲ್ಪಗಳಲ್ಲಿ ತಾರುಣ್ಯದ ಸೌಮ್ಯತೆ ಎದ್ದು ಕಾಣುತ್ತದೆಂಬುದು ಒಬ್ಬ ವಿಮರ್ಶಕನ ಅಭಿಪ್ರಾಯ.

	6ನೆಯ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ಹಲವು ಗುಹೆಗಳಲ್ಲಿ ಈ ಕಲೆ ಮುನ್ನಡೆಯಿತು. ಇದು ಬಹುಮಟ್ಟಿಗೆ ಶುದ್ಧ ಚೀನೀ ಶೈಲಿಯಲ್ಲಿದೆ. ಚೀನೀ ಬೌದ್ಧಶೈಲಿಯ ಪರಾಕಾಷ್ಠೆಯನ್ನು ತಲುಪಿದ ಈ ಹಂತದ ಕೃತಿಗಳಲ್ಲಿ 11ನೆಯ ಗುಹೆಯಲ್ಲಿರುವ ತ್ರಿಮೂರ್ತಿಗಳ ಮಧ್ಯದ ಬುದ್ಧಮೂರ್ತಿ ಗಮನಾರ್ಹ. ಕೃಶವಾದ ದೇಹ, ಅಭಯ ಮುದ್ರೆಯಲ್ಲಿರುವ ಬಲಗೈ, ವರದ ಮುದ್ರೆಯ ಎಡಗೈ, ಚಪ್ಪಟೆಯಾದ ಹಣೆ, ಚೂಪಾದ ಗಲ್ಲ, ನಸುನಗುವನ್ನು ಸೂಸುತ್ತಿರುವ ಬಾಯಿ, ಕಮಾನಿನಕಾರದ ಹುಬ್ಬು-ಇವು ಈ ಮೂರ್ತಿಯ ಆಕರ್ಷಕ ಸೌಂದರ್ಯವನ್ನು ಹೆಚ್ಚಿಸಿವೆ. ಉಡುಪನ್ನು ಕಲಾಪೂರ್ಣವಾಗಿ ರೂಪಿಸಿದೆ. ಪಾಶ್ರ್ವಗಳಲ್ಲಿರುವ ಬೋಧಿಸತ್ತ್ವಮೂರ್ತಿಗಳು ಉದ್ದವಾದ ಕಿರೀಟಗಳನ್ನು ಧರಿಸಿವೆ. ಅವೂ ಆಕರ್ಷಕವಾದ ಕೆತ್ತನೆಗಳು.
495ರ ಅನಂತರ, ವೇ ವಂಶಕ್ಕೆ ಲೋಯಾಂಗ್ ರಾಜಧಾನಿಯಾದ ಮೇಲೆ, ಬೌದ್ಧ ಶಿಲ್ಪಗಳು ಪೂರ್ಣವಾಗಿ ಚೀನೀ ಶೈಲಿಯಲ್ಲಿವೆ. ರಾಜಧಾನಿಯ ದಕ್ಷಿಣಕ್ಕೆ 16 ಕಿ.ಮೀ. ದೂರದಲ್ಲಿರವ ಲುಂಗ್-ಮೆನ್ ಬಳಿಯ ಸುಣ್ಣದಕಲ್ಲಿನ ಗುಡ್ಡಗಳಲ್ಲಿ ಚೀನೀ ಶಿಲ್ಪಿಗಳು ತಮ್ಮ ಕುಶಲ ಕೆತ್ತನೆಗಳನ್ನು ಮಾಡಿದ್ದಾರೆ. ಅಲ್ಲಿಯ ಕುಯಾಂಗ್ ಗುಹೆಯಲ್ಲಿಯ ಗೂಡುಗಳು ಅವ್ಯವಸ್ಥಿತ. ಆದರೆ ಪ್ರತಿಯೊಂದು ಗೂಡನ್ನೂ ಪ್ರತ್ಯೇಕವಾಗಿ ಪರಿಶೀಲಿಸಿದರೆ ಅವು ಯುನ್-ಕಾಂಗ್ ಗುಹೆಗಳಿಗಿಂತಲೂ ಅರ್ಥಪೂರ್ಣವೂ ಸುಂದರವೂ ಆಗಿರುವುದು. ವ್ಯಕ್ತವಾಗುತ್ತದೆ. ಹ್ಯಾನ್ ವಂಶಕಾಲದ ಸತ್ತ್ವಶಾಲಿ ಚಲನಾತ್ಮಕ ಶೈಲಿ ಇನ್ನೂ ಪ್ರಭಾವಯುತವಾಗಿತ್ತು. ಹಾರುತ್ತಿರುವ ಅಪ್ಸರೆಯರು, ಅಲೆಅಲೆಯಾದ ಮೋಡಗಳ ಸಮೂಹ ಕೃಶವಾದ ಗಿಡಬಳ್ಳಿಗಳು, ಇವು ಆ ಪ್ರಭಾವಗಳ ನೆನಪನ್ನುಂಟು ಮಾಡುತ್ತವೆ. ಬೌದ್ಧ ಆದರ್ಶಗಳಾದ ತ್ಯಾಗ, ವೈರಾಗ್ಯ, ದೈವಿಕ ಸಿದ್ಧಿಗಳು ಇಲ್ಲಿಯ ಬುದ್ಧ ಬೋಧಿಸತ್ತ್ವ ಶಿಲ್ಪಗಳಲ್ಲಿ ನಿರೂಪಿತವಾಗಿವೆ.	

	523ರಲ್ಲಿ ನಿರ್ಮಿಸಲಾದ ಪಿನ್-ಯಾಂಗ್ ಗುಹೆಯ ಅಗಲ 25', ಉದ್ದ 20', ವಿಶಾಲ ದ್ವಾರದೆದುರು ಹಿಂದಿನ ಗೋಡೆಗೆ ಹೊಂದಿಕೊಂಡಿರುವ 19' ಅಗಲದ ಜಗತಿಯ ಮೇಲೆ ಶಿಷ್ಯರಾದ ಆನಂದ ಮತ್ತು ಮಹಾಕಾಶ್ಯಪರಿಂದಲೂ ಇಬ್ಬರು ಬೋಧಿಸತ್ತ್ವರಿಂದಲೂ ಆವೃತನಾದ ಬುದ್ಧ ಪದ್ಮಾಸನದಲ್ಲಿ ಕುಳಿತಿದ್ದಾನೆ. ಈ ಮೂರ್ತಿ ಪ್ರಾಚೀನ ಚೀನದ ಅತ್ಯಂತ ಸುಂದರ ಮೂರ್ತಿಗಳಲ್ಲೊಂದು. ವಸ್ತ್ರಾಚ್ಛಾದಿತ ದೇಹ, ಅಭಯ, ವರದ ಮುದ್ರೆಗಳಲ್ಲಿರುವ ಕೈಗಳು, ಕೃಶವಾದ ಕತ್ತಿನ ಮೇಲಿರುವ ಆಯಾಕಾರದ ಮುಖ, ತಲೆಯ ಮೇಲಿನ ಉಷ್ಣೀಷ, ಅಗಲವಾದ ಕಿವಿಗಳು-ಈ ಲಕ್ಷಣಗಳು ಸುವ್ಯವಸ್ಥಿತ ವಾಸ್ತು ನಿರ್ಮಾಣವೊಂದರ ಕಲ್ಪನೆಯನ್ನು ಉಂಟುಮಾಡುತ್ತವೆ. ವಿಶ್ವಾಸ ತುಂಬಿರುವ ಈ ಮೂರ್ತಿ ಧಾರ್ಮಿಕ ಶಿಲ್ಪಗಳಲ್ಲಿ ವಿಶಿಷ್ಟವೂ ಅಪೂರ್ವವೂ ಆಗಿದ್ದು, ತಲೆಯ ಸುತ್ತ ಇರುವ ಪ್ರಭಾವಲಯದ ಅಂಚಿನಲ್ಲಿ ರೂಪಿಸಿರುವ ಜ್ವಾಲೆಗಳು ಚಾವಣಿಯವರೆಗೂ ಹಬ್ಬಿವೆ. ಅವುಗಳ ಮಧ್ಯೆ ಚಿತ್ರಿಸಿರುವ ಕಿನ್ನರ-ಗಂಧರ್ವರ ಕೆತ್ತನೆಗಳು ಮುಖ್ಯಶಿಲ್ಪದ ಅಂದವನ್ನೂ, ಧಾರ್ಮಿಕ ಗಹನತೆಯನ್ನೂ ದ್ವಿಗುಣಗೊಳಿಸಿವೆ. 7ನೆಯ ಶತಮಾನದ ಜಪಾನಿನ ಹೊರ್ಯೂಜಿಯ ಕಂಚಿನ ಶಿಲ್ಪಗಳಿಗೆ ಇವು ಮಾದರಿಗಳು, ಪಕ್ಕದ ಗೋಡೆಗಳ ಮೇಲೆ ಬುದ್ಧನ ಮತ್ತು ಅವನ ಇಕ್ಕೆಲಗಳಲ್ಲಿ ಅವಲೋಕಿತೇಶ್ವರ ಮತ್ತು ಮಹಾಸ್ತಾಮಪ್ರಾಪ್ತ ಬೋಧಿಸತ್ತ್ವರ ಮೂರ್ತಿಗಳಿವೆ. ಅವುಗಳ ಪ್ರಭಾವಳಿಗಳ ಮಧ್ಯೆ ಭಕ್ತಸಮೂಹ. ಮೇಲ್ಭಾಗದಲ್ಲಿ ಹಾರುತ್ತಿರುವ ದೇವತೆಗಳ ಕೆತ್ತನೆ ಸ್ವರ್ಗದ ಕಲ್ಪನೆಯನ್ನುಂಟು ಮಾಡುತ್ತದೆ. ಬಾಗಿಲಿನ ಎಡಬಲಬದಿಗಳಲ್ಲಿರುವ ಮುಂದಿನ ಗೋಡೆಗಳನ್ನು ನಾಲ್ಕು ಅಡ್ಡಪಟ್ಟಿಕೆಗಳನ್ನಾಗಿ ವಿಭಾಗಿಸಲಾಗಿದೆ. ಕೆಳಗಿನ ಪಟ್ಟಿಕೆಯಲ್ಲಿ ಗಿಡ, ಮರ, ಗಾಳಿ, ಪರ್ವತಗಳ ಅಧಿದೇವತೆಗಳಂತಿರುವ ವ್ಯಕ್ತಿಗಳು ಅದರ ಮೇಲಿನ ಪಟ್ಟಿಕೆಯಲ್ಲಿ ಎಡಪಾಶ್ರ್ವದಲ್ಲಿ ಚಕ್ರವರ್ತಿ ಮತ್ತು ಬಲಬದಿಯಲ್ಲಿ ಚಕ್ರವರ್ತಿನಿ ಮತ್ತು ಅವರ ಪರಿವಾರಗಳು ಈ ಗುಹೆಯ ನಿರ್ಮಾಣಕ್ಕೆ ಕಾರಣರಾಗಿರಬಹುದು. ಮೂರನೆಯ ಪಟ್ಟಿಕೆಯಲ್ಲಿ ಜಾತಕ ಕಥೆಗಳನ್ನು ಚಿತ್ರಿಸಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಬಲಗಡೆ ವಿಮಲಕೀರ್ತಿ ಮತ್ತು ಎಡಗಡೆ ಮಂಜುಶ್ರೀ, ಮಹಾಯನ ಪಂಥಕ್ಕೆ ಸೇರಿದ ವಿಮಲಕೀರ್ತಿ ನಿರ್ದೇಶನದಲ್ಲಿ ನೀಡಲಾದ ಧರ್ಮೋಪದೇಶ ಘಟನೆಯ ನಿರೂಪಣೆಯಲ್ಲಿ ಇವರನ್ನು ತೋರಿಸಲಾಗಿದೆ. ಈ ಅಡ್ಡಪಟ್ಟಿಕೆಗಳಲ್ಲಿ ಕೆಳಗಿನಿಂದ ಮೇಲಕ್ಕೆ ಹೋದಂತೆ ಭೂತಲದ ಪ್ರಾಣಿವರ್ಗ, ಮತ್ರ್ಯಲೋಕದ ಜನ, ಜಾತಕಕಥೆಗಳು, ಮತ್ತು ತುತ್ತತುದಿಯಲ್ಲಿ ದೈವೀ ಉಪದೇಶಾಮೃತ ಮತ್ತು ದೈವೀ ವ್ಯಕ್ತಿಗಳ ಚಿತ್ರಗಳಿವೆ. ಇವು ಕ್ರಮಾಗತ ಮುನ್ನಡೆಯ ಸಂಕೇತಗಳಾಗಿವೆಯೆನ್ನಬಹುದು.

	ಷಿನ್-ಯಾಂಗ್ ಗುಹೆಯ ಧಾರ್ಮಿಕ ಶಿಲ್ಪಗಳಾದ ಬುದ್ಧ-ಬೋಧಿಸತ್ತ್ವ ವಿಗ್ರಹಗಳ ಮತ್ತು ಲೌಕಿಕ ಶಿಲ್ಪಗಳಾದ ಚಕ್ರವರ್ತಿ-ಚಕ್ರವರ್ತಿನಿಯರ ಮತ್ತು ಜಾತಕಕಥೆಗಳ ಲೌಕಿಕ ನಿರೂಪಣೆಗಳಲ್ಲಿ ಗಮನಾರ್ಹ ವ್ಯತ್ಯಾಸಗಳು ಕಾಣಬರುತ್ತವೆ. ಧಾರ್ಮಿಕ ಲೌಕಿಕ ಶಿಲ್ಪಗಳ ನಿರೂಪಣೆಯಲ್ಲಿ ಸಾಂಪ್ರದಾಯಿಕ ನಿಯಮಗಳನ್ನು ಅನುಸರಿಸಬೇಕಾಗಿದ್ದುದರಿಂದ ಶಿಲ್ಪಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿರಲಿಲ್ಲ. ಆದರೆ ಲೌಕಿಕ ವಸ್ತು ನಿರೂಪಣೆಯಲ್ಲಿ ಪ್ರತಿಭಾ ಸ್ವಾತಂತ್ರ್ಯವಿತ್ತು. ಅವುಗಳಲ್ಲಿ ಕಂಡುಬರುವ ನಿರೂಪಣಾ ವೈವಿಧ್ಯಕ್ಕೆ ಇದು ಕಾರಣ.

	ಆ ಕಾಲದ ದೇವಾಲಯಗಳೂ ಅವುಗಳಲ್ಲಿದ್ದ ಕಂಚಿನ ಪ್ರತಿಮೆಗಳೂ ಬಹುಮಟ್ಟಿಗೆ ಕಣ್ಮರೆಯಾಗಿದ್ದರೂ ಕೆಲವು ಕಲ್ಲಿನ ವಿಗ್ರಹಗಳು ಉಳಿದುಬಂದಿವೆ. ಸಾರ್ವಜನಿಕರ ದತ್ತಿಗಳಿಂದ ನಿರ್ಮಿಸಿ, ದೇವಾಲಯಗಳ ಬಳಿ ಸ್ಥಾಪಿಸುತ್ತಿದ್ದ ಶಿಲಾಫಲಕಗಳು ಅವುಗಳಲ್ಲಿ ಮುಖ್ಯವಾದವು. ಶಿಲಾಫಲಕಗಳಲ್ಲಿ ಎರಡು ಬಗೆ. ಮೊದಲನೆಯದರಲ್ಲಿ ಆಯಾಕಾರದ ಆದರೆ ಮೇಲ್ಭಾಗ ದುಂಡಾದ, ಕಲ್ಲಿನ ಫಲಕಗಳ ಮೇಲೆ ಎರಡು, ನಾಲ್ಕು ಅಥವಾ ಆರು ಚೀನೀ ಡ್ರೇಗನ್‍ಗಳುಂಟು. ಇದು ಚೀನದಲ್ಲಿ ಬೌದ್ಧ-ಪೂರ್ವಕಾಲದಿಂದಲೂ ರೂಢಿಯಲ್ಲಿದ್ದ ವಿನ್ಯಾಸ. ಇಂಥ ಫಲಕಗಳ ಮೇಲೆ ಮೊದಲಿಗೆ ಸ್ಮಾರಕ ಶಾಸನಗಳನ್ನು ಕಡೆಯಲಾಗುತ್ತಿತ್ತು. ಬೌದ್ಧ ಮತದ ಕಾಲದಲ್ಲಿ ಶಾಸನಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿ ಅಥವಾ ಪೂರ್ಣ ಕೈಬಿಟ್ಟು. ತೆರವಾದ ಸ್ಥಳದಲ್ಲಿ ಬೌದ್ಧ ದೇವತೆಗಳನ್ನೋ ಧಾರ್ಮಿಕ ದೃಶ್ಯಗಳನ್ನೋ ಕಡೆಯಲಾಗುತ್ತಿತ್ತು. ಎರಡನೆಯ ಬಗೆಯ ಫಲಕ ದೊಡ್ಡ ಎಲೆಯ ಆಕಾರದಲ್ಲಿರುತ್ತಿತ್ತು. ಅದರ ಮೇಲೆ ಬೌದ್ಧಮತದ ತ್ರಿಮೂರ್ತಿಗಳನ್ನೂ ಇಕ್ಕೆಲಗಳಲ್ಲಿ ಬೋಧಿಸತ್ತ್ವನ ಮೂರ್ತಿಗಳನ್ನೂ ಕೆತ್ತಲಾಗುತ್ತಿತ್ತು. ಕೇವಲ ಬುದ್ಧ ವಿಗ್ರಹ ಇರುತ್ತಿದ್ದ ನಿದರ್ಶನಗಳೂ ಉಂಟು. ಇದು ಸಾಮಾನ್ಯವಾಗಿ ಕಂಚಿನ ಪ್ರಭಾವಲಯದಿಂದ ಕೂಡಿದ ಬುದ್ಧ ವಿಗ್ರಹಗಳನ್ನು ಹೋಲುತ್ತದೆ. ಚೀನದಲ್ಲಿ ಮರ, ಕಲ್ಲು ಮತ್ತು ಜೇಡಿಮಣ್ಣಿನ ವಿಗ್ರಹಗಳಿಗೆ ಬಣ್ಣ ಹಚ್ಚಿ ಅಲಂಕರಿಸುತ್ತಿದ್ದುದರಿಂದ, ಅಗ್ಗವಾದರೂ ಕಲ್ಲಿನ ಫಲಕಗಳು ಕಂಚಿನ ವಿಗ್ರಹಗಳಂತೆ ಸುಂದರವಾಗಿ ಕಾಣುತ್ತಿದ್ದು ಪೂಜೆಗೆ ಉಪಯೋಗಿಸಲ್ಪಡುತ್ತಿದ್ದುವು. ಸುತ್ತಲಿನ ಪ್ರಭಾವಲಯದ ಮೇಲೆ ಜ್ವಾಲೆಗಳನ್ನು ಸುಂದರವಾಗಿ ನಿರೂಪಿಸಲಾಗುತ್ತಿತ್ತು. ಜ್ವಾಲೆಗಳ ಮಧ್ಯೆ ಗಂಧರ್ವ ಅಪ್ಸರೆಯರ ಚಿತ್ರಗಳನ್ನು ತೋರಿಸಲಾಗುತ್ತಿತ್ತು. ಹೂಬಳ್ಳಿಗಳು, ಸಣ್ಣ ಪ್ರಾಣಿಗಳ ಚಿತ್ರಗಳೂ ಇದ್ದು ಅವುಗಳ ಅಂದವನ್ನು ವಸ್ತುಸಂಗ್ರಹಾಲಯದಲ್ಲಿ ಇಟ್ಟಿರುವ ಪ್ರಭೂತರತ್ನ ಮತ್ತು ಗೌತಮ ಬುದ್ಧರನ್ನು ತೋರಿಸುವ ಸಂಯುಕ್ತ ಫಲಕದಲ್ಲಿ ಕಾಣಬಹುದು. ಬರ್ನಾರ್ಡ್ ಬೆರೆನ್‍ಸನ್ನನ ಸಂಗ್ರಹದಲ್ಲಿರುವ ಫಲಕವೂ ಗಮನಾರ್ಹ. ಅನಂತರ ಕಾಲದ ಉತ್ತರ ಚೌ ವಂಶದ ಶಿಲ್ಪಶೈಲಿಗೆ ಇದು ಮಾದರಿಯಾಯಿತೆಂದು ಹೇಳಲಾಗಿದೆ.

	6ನೆಯ ಶತಮಾನದ ಬೌದ್ಧಧರ್ಮದ ಜನಪ್ರಿಯತೆಯ ಕಾರಣದಿಂದ ಮಧ್ಯ ಏಷ್ಯ, ಗಾಂಧಾರ ಮತ್ತು ಭಾರತಗಳತ್ತ ಚೀನೀಯರು ಧಾರ್ಮಿಕ ಪ್ರವಾಸ ಕೈಗೊಳ್ಳುವಂತಾಯಿತು. ಮತ್ತೆ ಆ ಪ್ರದೇಶಗಳಿಂದಲೂ ಚೀನಕ್ಕೆ ಅಧಿಕ ಸಂಖ್ಯೆಯಲ್ಲಿ ಬೌದ್ಧಭಿಕ್ಷುಗಳು ಬರಲಾರಂಭಿಸಿದರು. ಅದರ ಫಲವಾಗಿ ಬೌದ್ಧ ಧರ್ಮದ ಕೇಂದ್ರಸ್ಥಾನವಾದ ಭಾರತದ ಬೌದ್ಧಶಿಲ್ಪಶೈಲಿ ನೇರವಾಗಿ ತನ್ನ ಪ್ರಭಾವವನ್ನು ಚೀನದ ಮೇಲೆ ಬೀರುವಂತಾಯಿತು. ಈಗ ನೆಲ್ಸನ್ ಕಲಾಶಾಲೆಯಲ್ಲಿರುವ ಮೊದಲಿಗೆ ಷಾನಸೀಯ ವಾಯುವ್ಯಪ್ರದೇಶಕ್ಕೆ ಸೇರಿದ್ದ, 535-540ರಲ್ಲಿ ಕೆತ್ತಲಾದ ಬುದ್ಧ ಬೋಧಿಸತ್ತ್ವವನ್ನು ಮತ್ತು ಪರಿವಾರವರ್ಗದವರನ್ನೊಳಗೊಂಡ ಫಲಕದಲ್ಲಿ ಈ ಪ್ರಭಾವ ಕಾಣಬರುತ್ತದೆ. ಈ ಪ್ರತಿಮೆಗಳ ಅಂಗಾಂಶಗಳ, ಉಡುಪಿನ ಮತ್ತು ಅಲಂಕರಣವಿಶೇಷಗಳ ನಿರೂಪಣೆಯಲ್ಲಿ ಭಾರತೀಯ ಶೈಲಿ ಎದ್ದು ಕಾಣುತ್ತದೆ. ಆದರೂ ಕೆಲವು ಅಂಶಗಳಲ್ಲಿ ಪ್ರಾಚೀನ ಚೀನೀ ಶೈಲಿಯ ಪ್ರಭಾವವೂ ಉಳಿದುಬಂದಿದೆ. ಹ್ಸಿಯಾಂಗ್-ಟ್ಯಾಂಗ್‍ಷ್ಯಾನ್‍ನಲ್ಲಿ ಜಾತಕಕಥೆಗಳ ಮತ್ತು ಲೌಕಿಕ ದೃಶ್ಯಗಳ ನಿರೂಪಣೆಗೆ ಮೀಸಲಾದ ಹಲವಾರು ಉಬ್ಬು ಶಿಲ್ಪಗಳುಂಟು. ಚೀನದಲ್ಲಿ ಮೊದಲಿಗೆ ಹೀನಯಾನ-ಮಹಾಯಾನ ಪಂಥಗಳೆರಡಕ್ಕೂ ಸಾಕಷ್ಟು ಅನುಯಾಯಿಗಳಿದ್ದರೂ ಕ್ರಮೇಣ ಮಹಾಯಾನ ಪಂಥ ಪ್ರಬಲವಾಯಿತು. ಅದರ ಪರಿಣಾಮವಾಗಿ ಧಾರ್ಮಿಕ ಶಿಲ್ಪಗಳಲ್ಲಿ ಹೆಚ್ಚಿನ ವೈವಿಧ್ಯ ತಲೆದೋರಿತು. ಸ್ವರ್ಗದ ಆಕರ್ಷಕ ದೃಶ್ಯಗಳು, ಅಲಂಕಾರಯುತ ಅಮಿತಾಭ, ಮೈತ್ರೇಯ ಬೋಧಿಸತ್ತ್ವ ಇವರ ಸುಂದರಶಿಲ್ಪಗಳು ಜನಪ್ರಿಯವಾದುವು. ಫ್ರೀಯರ್ ಕಲಾಶಾಲೆಯಲ್ಲಿರುವ ಅಮಿತಾಭ ಬುದ್ಧನ ಉಬ್ಬುಶಿಲ್ಪ ಈ ಹೊಸ ಕಲಾನಿರ್ಮಾಣಗಳಿಗೆ ಒಂದು ಉತ್ತಮ ನಿದರ್ಶನ. ರತ್ನಗಳಿಂದ ಅಲಂಕೃತವಾದ ಛತ್ರದ ಕೆಳಗೆ ಕುಳಿತ ಅಮಿತಾಭನ ಸುತ್ತ ಇತರ ದೇವತೆಗಳನ್ನು ಕೆತ್ತಲಾಗಿದೆ. ಆಕಾಶದಲ್ಲಿ ಹೂಗಳು, ಸಂಗೀತವಾದ್ಯಗಳು, ಹಾರುತ್ತಿರುವ ಯಕ್ಷಗಂಧರ್ವರು ಚಿತ್ರಿತರಾಗಿದ್ದಾರೆ. ಪುಣ್ಯಜೀವಿಗಳಿಗೆ ಮೀಸಲಾದ ಭವ್ಯ ಅರಮನೆಗಳು ಉನ್ನತ ಗೋಪುರಗಳೊಂದಿಗೆ ಕಂಗೊಳಿಸುತ್ತಿವೆ. ಪುಣ್ಯಜೀವಿಗಳು ಈ ಸ್ವರ್ಗದಲ್ಲಿ ಕಮಲಪುಷ್ಪಗಳಿಂದ ಹುಟ್ಟಿಬರುತ್ತಿರುವಂತೆ ತೋರಲಾಗಿದೆ. ಈ ಕಾಲದಲ್ಲೂ ಶಿಲಾಫಲಕಗಳನ್ನು ಅಧಿಕಸಂಖ್ಯೆಯಲ್ಲಿ ನಿರ್ಮಿಸಲಾಗುತ್ತಿತ್ತು. ಈ ಶಿಲ್ಪಗಳನ್ನು ಮಾಡುತ್ತಿದ್ದ ಕಲೆಗಾರರು ತಮ್ಮ ಕಾರ್ಯದಲ್ಲಿ ಔನ್ನತ್ಯವನ್ನು ಸಾಧಿಸಿದ್ದರೆಂದು ಹೇಳಬಹುದು. ಗುಹೆಗಳ ಬಾಗಿಲುವಾಡ, ಕಂಬ ಮತ್ತು ಗೋಡೆಗಳ ಮೇಲೆ ಹೂಬಳ್ಳಿ, ಕಮಲ ಪುಷ್ಪ ಮತ್ತಿತರ ಅಲಂಕಾರ ಸಾಧನಗಳನ್ನು ಬಳಸಿದೆ. ಆಗಿನ ಕಾಲದಲ್ಲಿ ಚೀನೀ ಶಿಲ್ಪಿಗಳು ಭಾರತೀಯ ಮಾದರಿಗಳನ್ನು ತಮ್ಮ ಶೈಲಿಗೆ ಹೊಂದಿಸಿಕೊಳ್ಳುತ್ತಿದ್ದದ್ದು ಇವುಗಳಿಂದ ವ್ಯಕ್ತವಾಗುತ್ತದೆ.

	6ನೆಯ ಶತಮಾನದ ಮಧ್ಯಭಾಗದಲ್ಲಿ ಚೀನದ ಮಹಾಗೋಡೆಯ ಉತ್ತರದಲ್ಲಿ ಮತ್ತು ಮಧ್ಯ ಏಷ್ಯದಲ್ಲಿ ತುರ್ಕರು ಅಧಿಕಾರಕ್ಕೆ ಬಂದರು. ಮಂಗೋಲಿಯದಿಂದ ಆಫ್ಘಾನಿಸ್ಥಾನದವರೆಗೂ ಹಬ್ಬಿದ್ದ ಅವರ ಆಡಳಿತದಲ್ಲಿ ಹೊಸ ಪ್ರಭಾವಗಳು ತಲೆದೋರಿದುವು. ಶವಸಂಸ್ಕಾರಕ್ಕೆ ಸಂಬಂಧಿಸಿದ ಕಲ್ಲಿನಮಂಚವೊಂದು ಈ ಹೊಸ ಪ್ರಭಾವಗಳ ಉತ್ತಮ ನಿದರ್ಶನ. ಉತ್ತರ ಲೆಯಿ ವಂಶದ ಕಾಲಕ್ಕೆ ಸೇರಿದ ಮಂಚದ ವಿವಿಧ ಭಾಗಗಳು ಬೇರೆ ಬೇರೆ ವಸ್ತುಸಂಗ್ರಹಾಲಯಗಳಲ್ಲಿ ಸೇರಿಹೋಗಿವೆ. ಇದರ ಅಲಂಕರಣ ಕೆತ್ತನೆಗಳಲ್ಲಿ ಭಾರತೀಯ ಬೌದ್ಧ ಮತ್ತು ಪರ್ಷಿಯದ ಸಸ್ಸೇನಿಯನ್ ಮಾದರಿಗಳ ಪ್ರಭಾವಗಳು ಸಮ್ಮಿಳಿತವಾಗಿವೆ; ಚೀನೀ ಮಾದರಿಗಳು, ಸಂಪ್ರದಾಯಗಳು ಕಣ್ಮರೆಯಾಗಿವೆ. ಬಹುಶಃ ಚೀನದಲ್ಲಿ ಪರ್ಷಿಯ ಅಥವಾ ಮಧ್ಯ ಏಷ್ಯದ ಶ್ರೀಮಂತ ವ್ಯಕ್ತಿಯೊಬ್ಬನ ಸಮಾಧಿಗಾಗಿ ಈ ಮಂಚವನ್ನು ನಿರ್ಮಿಸಿದ್ದಿರಬಹುದು.

	ಮೆಟ್ರೋಪಾಲಿಟನ್ ಸಂಗ್ರಹಾಲಯದಲ್ಲಿರುವ ಈ ಕಾಲದ ಒಂದು ಕಲ್ಲಿನ ಫಲಕ ಚೀನೀ ಶಿಲ್ಪಿಗಳ ಕೌಶಲದ ಅತ್ಯುತ್ತಮ ನಿದರ್ಶನ. ಇದರಲ್ಲಿ ತೋರಿಸಿರುವ ಧೂಪದ ಬಟ್ಟಲು, ವಿದೇಶೀ ಉಡುಪುಗಳಲ್ಲಿರುವ ದೃಢಕಾಯರಾದ ತರುಣರು, ತಲೆಬುರುಡೆ ಮತ್ತು ಪಕ್ಷಗಳನ್ನು ಹಿಡಿದುಕೊಂಡಿರುವ ಇಬ್ಬರು ಸಂನ್ಯಾಸಿಗಳ ಶಿಲ್ಪಗಳು ವೈಯಕ್ತಿಕ ಶಿಲ್ಪಕೌಶಲದ ಚಲನಾತ್ಮ ಸರಳಶೈಲಿಯ ಸುಂದರ ಕೆತ್ತನೆಗಳು. ಆದರೆ ಬುದ್ಧನ ಉಡುಪಿನ ಮಡಿಕೆಗಳಲ್ಲಿ ಮೊದಲಿನ ಜಡತೆ ಕಂಡುಬರುತ್ತದೆ. ಕೆಳಗಿನ ಪಟ್ಟಿಕೆಯಲ್ಲಿ ಆಗ ಬಹಳ ಜನಪ್ರಿಯವಾಗಿದ್ದ ವಿಮಲಕೀರ್ತಿ ಸೂತ್ರದ ಆಯ್ದು ದೃಶ್ಯವೊಂದರಲ್ಲಿ ಬೋಧಿಸತ್ತ್ವ ಮಂಜುಶ್ರೀಯೊಂದಿಗೆ ಸಂಭಾಷಣೆಯಲ್ಲಿ ತೊಡಗಿರುವ ಶ್ರೀಮಂತನ ಚಿತ್ರ, ಒಬ್ಬ ಭಿಕ್ಷು ಮತ್ತು ಅಪ್ಸರೆ, ಅವರ ಸುತ್ತಲೂ ಹಿಂಬದಿಯಲ್ಲಿ ಬೆಳೆದು ನಿಂತಿರುವ ವೃಕ್ಷಲತಾಸಮೂಹ ಇವನ್ನು ಬಹಳ ಸುಂದರ ಹಾಗೂ ನೈಜವಾಗಿ ಕಡೆಯಲಾಗಿದೆ. ಈ ಶೈಲಿಯಲ್ಲಿ ಅಲಂಕಾರವಿನ್ಯಾಸಗಳಿಗೂ ಅವುಗಳ ಆಕರ್ಷಕ ಗುಣಗಳಿಗೂ ಪ್ರಾಧಾನ್ಯ ನೀಡಲಾಗಿದೆ.	ಇದರಿಂದ ಮೂಲಚಿತ್ರಗಳ ದೈವೀ ಸ್ವಭಾವಕ್ಕೆ ಸ್ವಲ್ಪಮಟ್ಟಿಗೆ ಧಕ್ಕೆ ಉಂಟಾಗಿದೆ ಎನ್ನಬಹುದು.

	ಹೋಪೇ ಪ್ರಾಂತ್ಯದ ಟಿಂಗ್-ಚೌ ಮತ್ತು ಪಾವೊ-ಟಿಂಗ್ ಪ್ರದೇಶಗಳಲ್ಲಿ ವಿಗ್ರಹ ನಿರ್ಮಾಣದ ಹಲವಾರು ಕೇಂದ್ರಗಳಿದ್ದುವು. ಅಲ್ಲಿಯ ಶಿಲ್ಪಿಗಳು ಸ್ಥಳೀಯವಾಗಿ ದೊರಕುತ್ತಿದ್ದ ಅಮೃತಶಿಲೆಯಲ್ಲಿ ದೊಡ್ಡಗಾತ್ರದ ಬುದ್ಧ ಬೋಧಿಸತ್ತ್ವರ ವಿಗ್ರಹಗಳನ್ನು ಉತ್ತಮ ಕೌಶಲದಿಂದ, ಆದರೆ ಸಾಂಪ್ರದಾಯಿಕ ನಿಯಮಗಳಿಗನುಸಾರವಾಗಿ, ನಿರ್ಮಿಸುತ್ತಿದ್ದರು. ಉಡುಪಿನೊಳಗೆ ದೇಹವನ್ನು ಸೂಚ್ಯವಾಗಿ ತೋರಿಸಲಾಗುತ್ತಿತು. ಮುಖದಲ್ಲಿ ಆಂತರಿಕ ಶಾಂತಿ ಸೌಮ್ಯತೆಗಳು ಪ್ರತಿಬಿಂಬತವಾಗುತ್ತಿದ್ದವು. ಭಾರತದ ಗುಪ್ತರ ಕಾಲದ ಬೌದ್ಧಶಿಲ್ಪಗಳನ್ನು ಹೋಲುವ ಈ ಕೃತಿಗಳು 6ನೆಯ ಶತಮಾನದ ಉತ್ತರಾರ್ಧಕ್ಕೆ ಸೇರುತ್ತವೆ. ಈ ವಿಗ್ರಹಗಳು ನೈಜವಾಗಿವೆ. ನಿಜಜೀವನದಲ್ಲಿ ಉಪಯೋಗಿಸುತ್ತಿದ್ದ ಕೆಲವು ಪ್ರತಿಮೆಗಳಲ್ಲಿ ವ್ಯಕ್ತಿಚಿತ್ರಣವನ್ನು ಹೋಲುವ ಅನೇಕ ಕೃತಿಗಳನ್ನು ಶಿಲ್ಪಿಗಳು ನಿರ್ಮಿಸಿದ್ದಾರೆ. ಇವರಿಗೆ ತಮ್ಮ ಪರಿಸರದ ನಿಕಟಪರಿಚಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಧಾರ್ಮಿಕ ಕೃತಿಗಳಲ್ಲೂ ಮಾನವ-ದೈವೀವಸ್ತುಗಳ ಸಾಮೀಪ್ಯವನ್ನು ಹೆಚ್ಚಿಸಿ ದೈವೀಪ್ರತಿಮೆಗಳಲ್ಲಿ ದಯೆ, ಆದ್ರ್ರತೆ ಮತ್ತು ಮಾನವೀಯತೆಗಳನ್ನು ರೂಪಿಸುವ ಕಾರ್ಯದಲ್ಲಿ ಇವರು ಸಫಲರಾಗಿದ್ದಾರೆ.

	ಸಮಕಾಲೀನ ಪೂರ್ವ ಮತ್ತು ಉತ್ತರ ಚೀನಗಳಲ್ಲಿ ಬೇರೊಂದು ರೀತಿಯ ಮತ್ತು ಭಾರತೀಯ ಶೈಲಿಯನ್ನು ಪ್ರತಿನಿಧಿಸುತ್ತಿದ್ದ ಶಿಲ್ಪಕೃತಿಗಳು ನಿರ್ಮಿತವಾಗುತ್ತಿದ್ದವು. ಸರಳ, ಸೌಮ್ಯ ಹಾಗೂ ಸಂಪದ್ಭರಿತವಾದ ಈ ಶೈಲಿ ಪ್ರಾಚೀನ ರಾಜಧಾನಿಯಾದ ಷೆನ್‍ಸೀ ಪ್ರಾಂತ್ಯದ ಚಾಂಗ್-ಆನ್‍ನಲ್ಲಿ ಕೇಂದ್ರೀಕೃತವಾಗಿತ್ತು. ದೊಡ್ಡ ಗಾತ್ರದ ಮತ್ತು ಸ್ಥೂಲವಾದ ಈ ಬೌದ್ಧವಿಗ್ರಹಗಳು ಅಗಲವಾದ ಮುಖವನ್ನೂ ದಪ್ಪವೂ ಜಡವೂ ಆದ ಉಡುಪಿನ ಮಡಿಕೆಗಳನ್ನೂ ಉಳ್ಳವಾದರೂ ಇವು ಭಾರತೀಯ ವಿಗ್ರಹಗಳ ಅನುಕರಣೆ. ಬಾಸ್ಟನ್ ಸಂಗ್ರಹಾಲಯದಲ್ಲಿರುವ ಅವಲೋಕಿತೇಶ್ವರನ ವಿಗ್ರಹ ಈ ಶೈಲಿಗೆ ಸೇರಿದ್ದು. ಇದರ ಕೈಗಳು, ಪಾದಗಳು ಮತ್ತು ಮುಖ ದುಂಡಾಗಿ ಭಾವಪೂರ್ಣವಾಗಿವೆ. ದೇಹದ ಮೇಲೆ ಅನೇಕ ಆಭರಣಗಳಿವೆ.

	590ರಲ್ಲಿ ಚೀನವನ್ನು ಒಗ್ಗೂಡಿಸಿದ ಸ್ವಿ ವಂಶದ ಪ್ರಮುಖ ದೊರೆಗಳಾದ ವನ್-ಟಿ ಮತ್ತು ಯಾಂಗ್-ಟಿ ಪ್ರಖರ ಬೌದ್ಧಧರ್ಮೀಯರು. ವನ್-ಟಿ ಒಂದು ಲಕ್ಷ ಹೊಸ ಬುದ್ಧ ವಿಗ್ರಹಗಳನ್ನೂ 15 ಲಕ್ಷ ಹಳೆಯ ವಿಗ್ರಹಗಳ ದುರಸ್ತಿಯನ್ನೂ ಮಾಡಿಸಿದನೆಂದು ಹೇಳಲಾಗಿದೆ. ಆ ಕಾಲಕ್ಕೆ ಸೇರಿದ, ಈಗ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿರುವ 19' ಎತ್ತರದ ಅಮಿತಾಭ ಬುದ್ಧ ವಿಗ್ರಹ ಉತ್ತಮ ಕಲಾಕೃತಿ. ಇದರ ಕಾಲ 585.

	ಚೀನದ ಶಿಲ್ಪಕಲೆಯ ಪರಮೋನ್ನತ ಕಾಲವಾದ ಈ ಶತಮಾನದ ಅನೇಕ ಕೃತಿಗಳು ನಾಶವಾಗಿವೆ. ದೊಡ್ಡ ಕಂಚಿನ ಶಿಲ್ಪಗಳನ್ನು ಲೋಹಕ್ಕಾಗಿ ಕರಗಿಸಿರಬಹುದು. ಮರ, ಜೇಡಿಮಣ್ಣು ಮತ್ತು ಅರಗಿನ ಸಾವಿರಾರು ವಿಗ್ರಹಗಳೂ ನಾಶವಾಗಿವೆ. ಉಳಿದು ಬಂದಿರುವ ಕೆಲವೇ ಕಲಾಕೃತಿಗಳ ಆಧಾರದ ಮೇಲೆ ಆಗಿನ ಶಿಲ್ಪಕಲೆಯ ಅಮೋಘ ಸಾಧನೆಯ ನಿಜವಾದ ಮಟ್ಟವನ್ನು ಅಳೆಯುವುದು ಕಷ್ಟ. ಈಗ ಬಾಸ್ಟನ್ ಸಂಗ್ರಹಾಲಯದಲ್ಲಿರುವ 593ರಲ್ಲಿ ಮಾಡಲಾದ, ಅಮಿತಾಭ ಬುದ್ಧ ವಿಗ್ರಹ ನಿಜವಾಗಿಯೂ ಉತ್ತಮ ಕಲಾಕೃತಿ, ನಾಲ್ವರು ಶಿಷ್ಯರು, ದಾಳಿಂಬೆ ಹಣ್ಣನ್ನು ಹಿಡಿದಿರುವ ಅವಲೋಕಿತೇಶ್ವರ, ಅಂಜಲಿಬದ್ಧ ಮಹಾಸ್ರಾಮಪ್ರಾಪ್ತ ಇವರು ರತ್ನ ಖಚಿತಪದ್ಮಾಸನದ ಮೇಲೆ ಕುಳಿತ ಅಮಿತಾಭನನ್ನು ಸುತ್ತುವರಿದಿದ್ದಾರೆ. ಆಸನದ ಮೇಲ್ಭಾಗದ ಆಯಾಕಾರದ ಪ್ರಭಾವಳಿಯನ್ನು ಪದ್ಮಪುಷ್ಪಗಳಿಂದ ಅಲಂಕರಿಸಲಾಗಿದೆ.

	ಸ್ವಿ ವಂಶದ ಆಡಳಿತದಲ್ಲಿ ಐಕಮತ್ಯ ಸಾಧಿಸಿದ ಚೀನ ಸ್ವಲ್ಪ ಕಾಲಾನಂತರ ಮತ್ತೆ ಹರಿದು ಹಂಚಿಹೋಯಿತು. ಟ್ಯಾಂಗ್ ವಂಶಸ್ಥಾಪಕ ಲಿಷಿ-ಮಿನ್ 618ರಲ್ಲಿ ಇಡೀ ದೇಶವನ್ನು ಪುನಃ ಒಂದುಗೂಡಿಸಿದ. ದೇಶದಲ್ಲಿ ಜನಸಾಂದ್ರತೆ ಹೆಚ್ಚಿತು. ನಾಡು ಸಂಪದ್ಭರಿತವಾಯಿತು. ಸುವ್ಯವಸ್ಥಿತ ನಗರಗಳ ನಿರ್ಮಾಣವಾಯಿತು. ಪ್ರಪಂಚದ ವಿವಿಧ ಭಾಗಗಳಿಂದ ಬಂದ ಧಾರ್ಮಿಕ ವ್ಯಕ್ತಿಗಳು, ರಾಜದೂತರು, ವ್ಯಾಪಾರಿಗಳು ಚೀನದಲ್ಲಿ ನೆಲಸಿ ಅಲ್ಲಿಯ ಜನಜೀವನದಲ್ಲಿ ಪಾಲ್ಗೊಂಡರು. ಸಾಮಾಜಿಕ ಜೀವನದಲ್ಲಿ ಒಂದು ರೀತಿಯ ವಿಶ್ವಪ್ರಜಾದೃಷ್ಟಿ ಕಂಡುಬರಲಾರಂಭವಾಯಿತು.

	ಇಂಥ ಅನುಕೂಲ ಪರಿಸ್ಥಿತಿಯಲ್ಲಿ ವಿಶಾಲ ಧಾರ್ಮಿಕ ಮತ್ತು ಕಲಾಪ್ರಗತಿ ಆಗಿದ್ದು ಆಶ್ಚರ್ಯವಲ್ಲ. 700ರ ಸುಮಾರಿಗೆ ಬೌದ್ಧಧರ್ಮ ಸುವ್ಯವಸ್ಥಿತ ಧಾರ್ಮಿಕ ಸಂಸ್ಥೆಯಾಗಿ ಜನಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರಲಾರಂಭಿಸಿತು. ಏಳನೆಯ ಶತಮಾನದಲ್ಲಿ ಚೀನದ ಬೌದ್ಧ ಧರ್ಮೀಯರು ಬೌದ್ಧಧರ್ಮಕ್ಷೇತ್ರ ಸಂದರ್ಶನ ಮತ್ತು ಧರ್ಮಗ್ರಂಥ ಸಂಚಯನಕ್ಕಾಗಿ ಭಾರತದತ್ತ ಅಧಿಕ ಸಂಖ್ಯೆಯಲ್ಲಿ ಪ್ರವಾಸ ಕೈಗೊಂಡರು. ಅಂಥವರಲ್ಲಿ ಪ್ರಮುಖನೆಂದರೆ ಹ್ಯು-ಎನ್‍ತ್ಸಾಂಗ್. ಚೀನದಲ್ಲಿ ಬೌದ್ಧ ಧರ್ಮ ಪ್ರಬಲವಾಯಿತು. ಅದರೊಂದಿಗೆ ಕೆಲವು ಹೊಸ ಬೌದ್ಧಪಂಥಗಳೂ ಬೌದ್ಧಪಂಡಿತರೂ ಚೀನವನ್ನು ಪ್ರವೇಶಿಸುವಂತಾಯಿತು. 719ರಲ್ಲಿ ಬಂದು 732ರವರೆಗೂ ಕಾರ್ಯತತ್ಪರನಾಗಿದ್ದ ವಜ್ರಬೋಧಿ, 774ರವರೆಗೂ ಕಾರ್ಯನಿರತನಾಗಿದ್ದ ಅಮೋಘವಜ್ರ-ಇವರಿಂದ ಹುಟ್ಟಿಕೊಂಡ ಚೆನ್-ಯೆನ್ (ಜಪಾನಿನ ಷಿಂಗಾನ್) ಎಂಬ ತಂತ್ರಪ್ರಧಾನ ಬೌದ್ಧಪಂಥ ಇವುಗಳಲ್ಲಿ ಮುಖ್ಯವಾದದ್ದು. ಹಿಂದೂ ತಾಂತ್ರಿಕ ಪಂಥಗಳ ಪ್ರಭಾವಕ್ಕೊಳಗಾದ ಆ ಪಂಥೀಯರಲ್ಲಿ ಮಾಂತ್ರಿಕ ವ್ಯವಹಾರ ಮತ್ತು ಕರ್ಮನಿಷ್ಠಪದ್ಧತಿಗಳು ಪ್ರಧಾನವಾಗಿದ್ದುವು. ಇದರಿಂದ ಆನೇಕ ಹೊಸ ದೇವತೆಗಳೂ ಹಳೆಯ ದೇವತೆಗಳ ಹೊಸ ರೂಪಗಳೂ ಹುಟ್ಟಿಕೊಂಡುವು. ತಂತ್ರಪದ್ಧತಿಗನುಸಾರವಾಗಿ ಧರ್ಮಗುರುಗಳು ವಿಧಿಸುತ್ತಿದ್ದ ಕಟ್ಟುಪಾಡುಗಳಿಗೆ ಒಳಪಟ್ಟು ಶಿಲ್ಪಿಗಳು ವಿಗ್ರಹ ನಿರ್ಮಾಣ ಮಾಡಬೇಕಾಗಿದ್ದುದರಿಂದ ಕಲಾಪ್ರಗತಿ ಬಹಳ ಕುಂಠಿತವಾಯಿತೆನ್ನಬಹುದು. ಆದರೆ ಇದರೊಂದಿಗೆ ಬೌದ್ಧತತ್ತ್ವ ಶಾಸ್ತ್ರದಲ್ಲಿ ಉಂಟಾದ ಬೌದ್ಧಿಕ ಪ್ರಗತಿಯಾಗಿ ಚಾನ್ (ಜಪಾನಿನ eóÉನ್) ಪಂಥ ಹುಟ್ಟಿಕೊಂಡಿತು. ಅದರ ಪ್ರತಿಕ್ರಿಯೆ ಶಿಲ್ಪದಲ್ಲೂ ಕಂಡುಬರುತ್ತದೆ.

	ಟಾಂಗ್ ವಂಶದ ಮೊದಲ ಎರಡು ಶತಮಾನಗಳಲ್ಲಿ ಬೌದ್ಧಧರ್ಮ ಪ್ರಬಲವಾಗಿದ್ದರೂ ಉಳಿದು ಬಂದಿರುವ ಶಿಲ್ಪಗಳು ಕಡಿಮೆ. ಕಂಚು, ಮರ, ಜೇಡಿಮಣ್ಣು ಮತ್ತು ಅರಗಿನಂಥ ಸುಲಭವಾಗಿ ರೂಪಸಬಹುದಾದ, ಆದರೆ ಬೇಗ ನಾಶವಾಗುವ ವಸ್ತುಗಳಿಂದ ಶಿಲ್ಪಗಳನ್ನು ನಿರ್ಮಿಸುತ್ತಿದ್ದುದೂ ರೂಪಿಸಲು ಕಷ್ಟಸಾಧ್ಯವಾದ ಕಲ್ಲಿನ ಬಳಕೆಯನ್ನು ಕೈಬಿಟ್ಟಿದ್ದು ಬಹುಶಃ ಇದಕ್ಕೆ ಮುಖ್ಯ ಕಾರಣ. ಅನಂತರ ಕಾಲದ, ಮುಖ್ಯವಾಗಿ 845ರಲ್ಲಿ ಸಂಭವಿಸಿದ, ಬೌದ್ಧಧರ್ಮ ದ್ವೇಷ ಮತ್ತು ವಿಧ್ವಂಸ ಕೃತ್ಯಗಳು ಕೂಡ ಆ ಶಿಲ್ಪಗಳ ನಾಶಕ್ಕೆ ಕಾರಣವಾಗಿರಬಹುದು. ಟ್ಯಾಂಗ್ ಕಾಲದ ಶಿಲ್ಪಕಲೆಯ ಔನ್ನತ್ಯವನ್ನು ತಿಳಿಯಲು ಜಪಾನಿನ ಹಕುಹೊ ಮತ್ತು ಟೆಂಪ್ಸೊ ಸಾಮ್ರಾಜ್ಯಗಳ ಕಾಲದ ಶಿಲ್ಪಗಳನ್ನು ಪರೀಕ್ಷಿಸಬೇಕಾಗುತ್ತದೆ. 

	ಚೀನದಲ್ಲಿ ಆ ಕಾಲದ ಶಿಲ್ಪಗಳು ಅಧಿಕ ಸಂಖ್ಯೆಯಲ್ಲಿ ಹೊನ್ನಾನಿನ ಲುಂಗ್ ಮೆನ್ ಗುಹೆಗಳ ಫಂಗ್-ಹ್ಸಿಯೆನ್ ಮಂದಿರದಲ್ಲಿವೆ. 650-683ರ ನಡುವೆ ಆಳಿದ ಚಕ್ರವರ್ತಿ ಕಾವೋ-ಟ್ಸುಂಗನ ಆಶ್ರಯದಲ್ಲಿ ಆ ಮಂದಿರದ ನಿರ್ಮಾಣವಾಯಿತು. ಮಧ್ಯದಲ್ಲಿರುವ ಬುದ್ಧ ವೈರೋಚನ ವಿಗ್ರಹದ ದೇಹ 35' ಎತ್ತರ; ಪೀಠದ ಅಡಿಯಿಂದ ತೇಜೋವಲಯದ ತುದಿಯವರೆಗಿನ ಎತ್ತರ 50'. ವೈರೋಚನನ ಆಸನವಾದ ಕಮಲದ ಸಾವಿರ ದಳಗಳು ಸಾವಿರ ಲೋಕಗಳನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ಲೋಕಕ್ಕೂ ಪ್ರತ್ಯೇಕ ಬುದ್ಧನಿರುತ್ತಾನೆ. ಪ್ರತಿಯೊಂದು ಲೋಕವೂ ನೂರಾರು ದಶಲಕ್ಷ ಬುದ್ಧ ಪ್ರಪಂಚಗಳನ್ನು ಪ್ರತಿನಿಧಿಸುತ್ತವೆ. ಇಂಥ ಕಲ್ಪನೆಯ ಪ್ರತೀಕವಾದ ಮೂರ್ತಿಯ ಘನತೆಯನ್ನು ಈ ವಿಗ್ರಹದಲ್ಲಿ ರೂಪಿಸುವ ಕಾರ್ಯದಲ್ಲಿ ಶಿಲ್ಪಿಗಳು ಸಫಲರಾಗಿದ್ದಾರೆ. ದುಂಡಾದ ತುಂಬುಮುಖ, ವಿಶಾಲ ಕಣ್ಣುಗಳು, ನೀಳವಾದ ಕಮಾನಿನಂಥ ಕಣ್ಣಿವೆಗಳು ಈ ಮೂರ್ತಿಯ ಘನತೆಯನ್ನು ಹೆಚ್ಚಿಸುತ್ತವೆ; ಎಡ ಭಾಗದಲ್ಲಿರುವ ಬೋಧಿಸತ್ತ್ವ ವಿಗ್ರಹ ಈ ಪರಿಣಾಮವನ್ನು ದ್ವಿಗುಣಿಸುತ್ತದೆ.

	ಷಾನ್ ಸೀ ಪ್ರಾಂತ್ಯದ ಟಿಯೆನ್-ಲುಂಗ್ ಷಾನ್‍ನಲ್ಲಿರುವ ಬೌದ್ಧ ಗುಹೆಗಳ ಶಿಲ್ಪಗಳಲ್ಲಿ (ಸು. 684-755) ಲುಂಗ್ ಮೇನ್‍ನಲ್ಲಿ ಕಾಣಿಸಿಕೊಳ್ಳುವ ನೈಜತೆಯ ನಿರೂಪಣೆಗೆ ಹೆಚ್ಚು ಗಮನ ಕೊಡಲಾಗಿದೆ. 21ನೆಯ ಗುಹೆಯಲ್ಲಿರುವ ಬುದ್ಧ ಬೋಧಿಸತ್ತ್ವರ ಪ್ರತಿಮೆಗಳಲ್ಲಿ ಈ ಲಕ್ಷಣಗಳು ಕಾಣುತ್ತವೆ. ಸಹಜವಾಗಿ ಕುಳಿತಿರುವ ಎರಡು ವಿಗ್ರಹಗಳಲ್ಲೂ ತಲೆ ಮತ್ತು ದೇಹಗಳು ಒಂದು ಕಡೆಗೆ ಸ್ವಲ್ಪ ವಾಲಿದ್ದು, ದೇವತೆಗಳಿಗೆ ಸಹಜವಾದ ಘನತೆ ಸೌಮ್ಯತೆಗಳು ಪ್ರಧಾನವಾಗಿವೆ.

	ಅದೇ ಕಾಲಕ್ಕೆ ಸೇರಿದ ಇನ್ನು ಕೆಲವು ಶಿಲ್ಪಗಳಲ್ಲಿ ಈ ನೈಜತೆ ಇಲ್ಲ. ಮೊದಲಿನ ಜಡತೆ ಮತ್ತು ಸಾಂಪ್ರದಾಯಿಕತೆ ಉಳಿದುಬಂದಿವೆ. ಫ್ರೀಯರ್ ಸಂಗ್ರಹದ ಹನ್ನೊಂದು ತಲೆಗಳ ಕು ಅನ್-ಯಿನ್ ಬೋಧಿಸತ್ತ್ವ ಶಿಲ್ಪದಲ್ಲಿ ಸ್ಥಿರವೂ ಆದ ದೇಹನಿರೂಪಣೆ ಪ್ರಧಾನ. ವಿಗ್ರಹದ ಮುಖ್ಯ ತಲೆಯ ಮೇಲಿರುವ ಎತ್ತರವಾದ ಕಿರೀಟದ ಮೇಲೆ ಮೂರು ಸಾಲುಗಳಲ್ಲಿ ಹತ್ತು ತಲೆಗಳನ್ನು ತೋರಿಸುವ ಮೂಲಕ, ಹನ್ನೊಂದು ತಲೆಗಳನ್ನು ತೋರಿಸುವ ನಿರೂಪಣ ಸಮಸ್ಯೆಯನ್ನು ಬಗೆಹರಿಸಲಾಗಿದೆ.

	ಈ ಕಾಲದ ಕಲ್ಲುಫಲಕಗಳಲ್ಲಿ ಮೆಟ್ರೋಪಾಲಿಟನ್ ಸಂಗ್ರಹದ ಇಬ್ಬರು ಬೃಹತ್ ಬೋಧಿಸತ್ತ್ವರನ್ನು ತೋರಿಸುವ ಕಪ್ಪುಕಲ್ಲಿನ ಫಲಕ ಮುಖ್ಯವಾದ್ದು. ಸುಲಭ ಶೈಲಿಯಲ್ಲಿ ನಿಂತ ಪ್ರಮಾಣಬದ್ಧ ದೇಹಗಳನ್ನು ಹೊಂದಿರುವ ಈ ಮೂರ್ತಿಗಳು ಶಾಂತಿ, ಸೌಮ್ಯತೆ, ಘನತೆಗಳನ್ನು ಸೂಸುತ್ತವೆ. ಅವುಗಳ ನಿರೂಪಣೆಯಲ್ಲಿ ತಾಂತ್ರಿಕ ಪರಿಪೂರ್ಣತೆ ಮತ್ತು ಹಿಡಿತ ಕಾಣುತ್ತವೆ; ಅವುಗಳ ನಿಲುವು ಸರಳವೂ ಆಹ್ಲಾದಕರವೂ ಆಗಿದ್ದು. ಈ ಶೈಲಿ 14ನೆಯ ಶತಮಾನದವರೆಗೂ ರೂಢಿಯಲ್ಲಿತ್ತು.

	ನಿಜವಾದ ದುಂಡುಶಿಲ್ಪಗಳು ಟ್ಯಾಂಗ್ ಅರಸರ ಆಶ್ರಯದಲ್ಲಿ 8ನೆಯ ಶತಮಾನದಲ್ಲಿ ಮೊದಲ ಬಾರಿಗೆ ನಿರ್ಮಾಣವಾದುವು. ಆವರೆಗಿನ ಹೆಚ್ಚಿನ ಶಿಲ್ಪಗಳು ಮುನ್ನೋಟಕ್ಕೆ ಪರಿಣಾಮಕಾರಿಗಳಾಗಿ ಕಂಡರೂ ಅವುಗಳ ಪಾಶ್ರ್ವಗಳನ್ನು ಮತ್ತು ಹಿಂಬದಿಗಳನ್ನು ಸಹ ಪೂರ್ಣವಾಗಿ ರೂಪಿಸಲಾಗುತ್ತಿತ್ತು. ಇದರ ಉತ್ತಮ ನಿದರ್ಶನವೆಂದರೆ ಫ್ರೀಯರ್ ಕಲಾಶಾಲೆಯಲ್ಲಿರುವ ಬೋಧಿಸತ್ತ್ವ ವಿಗ್ರಹ. ಅದರ ನೈಜ ಸರಳ ನಿಲುವು ಮತ್ತು ಉಡುಪಿನ ನಿರೂಪಣೆಗಳಲ್ಲಿ ಈ ಅಂಶ ಎದ್ದು ಕಾಣುತ್ತದೆ.

	ಹೋಪೇ ಪ್ರಾಂತ್ಯದ ಶಿಲ್ಪಗಳು ಉತ್ತರ ಚೌ ವಂಶದ ಕಾಲದಿಂದ ಬೆಳೆದು ಬಂದಿದ್ದ ಕಾಲನೈಪುಣ್ಯದಿಂದ ಈ ಕಾಲದಲ್ಲೂ ಉತ್ತಮ ಕೃತಿಗಳನ್ನು ನಿರ್ಮಿಸುತ್ತಿದ್ದರು. ಕ್ಲೀವ್‍ಲೆಂಡ್ ಸಂಗ್ರಹಾಲಯದ ಬೋಧಿಸತ್ತ್ವ ವಿಗ್ರಹದಲ್ಲಿ ದೃಢತೆ ಮತ್ತು ಸತ್ತ್ವಯುಕ್ತ ನಿಲುವನ್ನು ಕಾಣಬಹುದು. ಅದರ ಒಟ್ಟು ಸೌಂದರ್ಯ ಮೇಲಿನ ಕೃತಿಯಷ್ಟು ಗಮನಾರ್ಹವಾಗಿಲ್ಲ. ಬಹುಶಃ ವಿಗ್ರಹದ ಬೇರೆಬೇರೆ ಭಾಗಗಳನ್ನೂ ಕೈಗಳನ್ನೂ ಪ್ರತ್ಯೇಕವಾಗಿ ಮಾಡಿ ಕಬ್ಬಿಣದ ಕೊಕ್ಕೆಗಳಿಂದ ಅವನ್ನು ಮುಂಡದೊಂದಿಗೆ ಕೂಡಿಸುತ್ತಿದ್ದಂತೆ ಕಂಡುಬರುತ್ತದೆ. ಒಟ್ಟಿನಲ್ಲಿ ಈ ಶಿಲ್ಪಿಗಳು ಉತ್ತಮ ಮಟ್ಟದ ಕೌಶಲವನ್ನು ಪ್ರದರ್ಶಿಸಿದ್ದಾರೆ.

	ಈಗ ಫಾಗ್ ಸಂಗ್ರಹಾಲಯದಲ್ಲಿರುವ, ಮೊದಲಿಗೆ ಟುನ್-ಹುವಾಂಗ್‍ನ 143ನೆ ಗುಹೆಯಲ್ಲಿದ್ದ, ಜೇಡಿಮಣ್ಣಿನ, ವಿವಿಧ ವರ್ಣಗಳಿಂದ ಕೂಡಿದ, ಪೂಜಾಮಗ್ನ ಬೋಧಿಸತ್ತ್ವನ ವಿಗ್ರಹ ಗಮನಾರ್ಹ. ಅದರ ಸುಂದರ ಸರಳ ವಿಶ್ವಾಸ ಪೂರ್ಣ ಗಂಭೀರ ಮುಖದಲ್ಲಿ ಧಾರ್ಮಿಕ ಕಳೆ ಹೊಮ್ಮುತ್ತದೆ.

	ಟಾಂಗ್ ಕಾಲದ ಕಂಚಿನ ಸಣ್ಣ ಶಿಲ್ಪಗಳಲ್ಲಿ ಮೆಟ್ರೋಪಾಲಿಟಿನ್ ಸಂಗ್ರಹಾಲಯದಲ್ಲಿರುವ ಧರ್ಮಚಕ್ರ ಪ್ರವರ್ತನ ಮುದ್ರೆಯಲ್ಲಿರುವ ಗೌತಮಬುದ್ಧನ ವಿಗ್ರಹ ಗಮನಾರ್ಹವಾದದ್ದು. ಆ ವಂಶದ ಕೊನೆಗಾಲದಲ್ಲಿ ಕ್ಲಿಷ್ಟವಾದ ರೂಪಗಳ ನಿರೂಪಣೆಗೆ ಆದ್ಯತೆ ನೀಡಿದ್ದಂತೆ ಕಾಣುತ್ತದೆ. 9ನೆಯ ಶತಮಾನಕ್ಕೆ ಸೇರಿದ, ಈಗ ಫಿಲಿಡೆಲ್ಫಿಯ ಸಂಗ್ರಹಾಲಯದಲ್ಲಿರುವ, ಬೋಧಿಸತ್ತ್ವ ಮೂರ್ತಿ ಇದಕ್ಕೆ ನಿದರ್ಶನ. ಪೂರ್ಣ ಪ್ರಕಾಶಗೊಂಡ ಈ ಮೂರ್ತಿಯ ಸೌಂದರ್ಯ, ಪೀಠದಲ್ಲಿ ಸಿಕ್ಕಿಕೊಂಡಂತಿರುವ ಉಡುಪಿನ ಹಲವು ಮಡಿಕೆಗಳು, ದೇಹದ ಮೇಲ್ಭಾಗದ ಅನೇಕ ಆಭರಣಗಳು ಈ ಶೈಲಿಯ ಕುರುಹುಗಳು.

	ದೊಡ್ಡಗಾತ್ರದ ಅನೇಕ ಕುದುರೆ ಸಿಂಹಗಳ ಮತ್ತು ರಾಜಾಸ್ಥಾನದ ಪ್ರಮುಖ ವ್ಯಕ್ತಿಗಳ ವಿಗ್ರಹಗಳನ್ನು ಆ ಕಾಲದಲ್ಲಿ ನಿರ್ಮಿಸಲಾಗುತ್ತಿತ್ತು. ಬಹುಶಃ ಈ ವಿಗ್ರಹಗಳನ್ನು ಚಕ್ರವರ್ತಿಗಳ ಮತ್ತು ಶ್ರೀಮಂತರ ಸಮಾಧಿಗಳ ಮುಂದಿನ ಮಾರ್ಗಗಳ ಪಾಶ್ರ್ವಗಳಲ್ಲಿ ನೆಡಲಾಗುತ್ತಿತ್ತು. ಗಾವೋ-ಡ್ಸುಂಗನ (628-683) ಸಮಾಧಿಯ ಬಳಿ ಇಂಥ ದುಂಡುಶಿಲ್ಪಗಳಿವೆ. ಇವು ಶಿಲ್ಪಿಗಳ ಶ್ರಮಪೂರ್ಣವಾದ ಆದರ ಕೌಶಲರಹಿತವಾದ ಒರಟು ಕೃತಿಗಳು. ಇವುಗಳಲ್ಲಿ ರೆಕ್ಕೆಗಳುಳ್ಳ ಒಂದು ಕುದುರೆಯ ಶಿಲ್ಪ ಮಾತ್ರ ನೈಜ ಸರಳ ಸುಂದರ ಕೃತಿ. ಪ್ರಾಣಿಗಳ ಸಣ್ಣ ಶಿಲ್ಪಗಳಲ್ಲಿ ನೈಜತೆಗೆ ಪ್ರಾಧಾನ್ಯ ನೀಡಲಾಗಿದೆ. ಅವು ಟಂಗ್ ಶಿಲ್ಪಕಲೆಯ ಅತ್ಯುತ್ತಮ ನಿದರ್ಶನಗಳೆಂದು ಪರಿಗಣಿಸಬಹುದು. ಟಿಂಗ್-ಚೌ ಮತ್ತು ಪಾವೋಟಿಂಗ್ ಪ್ರದೇಶದಲ್ಲಿ ಅಮೃತಶಿಲೆಯಲ್ಲಿ ಕಡೆದ ಸಿಂಹದ ಶಿಲ್ಪ (700-750) ಪ್ರಮಾಣಬದ್ಧವಾದ ದೇಹ ಮತ್ತು ನೈಜ ಚಿತ್ರಣಗಳಿಂದ ಕೂಡಿದ ಉತ್ತಮ ಕೃತಿ. ಕೃಶವಾದರೂ ಮಾಂಸಖಂಡಯುಕ್ತವಾದ ಶರೀರ. ಹೊಳೆಯುವ ಕಣ್ಣುಗಳು, ಗರ್ಜಿಸುತ್ತಿರುವ ಬಾಯಿ, ಇವು ಸಿಂಹದ ಶಕ್ತಿಯನ್ನೂ ರೌದ್ರತೆಯನ್ನೂ ನಿರೂಪಿಸುತ್ತವೆ. 10-12ನೆಯ ಶತಮಾನಗಳಲ್ಲಿ ಚೀನದ ಟಾಂಗ್ ಆಡಳಿತ ಆಗ್ನೇಯದ ಕಡೆಯಿಂದ ಬಂದ ಆಕ್ರಮಣಕಾರರಿಂದ ನಾಶವಾಯಿತು. 13ನೆಯ ಶತಮಾನದಲ್ಲಿ ಅದನ್ನು ಮಂಗೋಲರು ಆಳಲಾರಂಭಿಸಿದರು. ಅಂತರಿಕ ಗಲಭೆಗಳಿಂದ ಕೂಡಿದ ಈ ಕಾಲದಲ್ಲಿ ಕಲಾಭಿವೃದ್ಧಿಗೆ ಗಮನ ದೊರೆಯಲಿಲ್ಲ. 11ನೆಯ ಶತಮಾನದ ಆದಿಭಾಗದಲ್ಲಿ ಅಧಿಕಾರಕ್ಕೆ ಬಂದ ಸುಂಗ್ ದೊರೆಗಳು ಬೌದ್ಧಧರ್ಮೀಯರು, ರಾಜಕೀಯವಾಗಿ ಅವರು ಆಕ್ರಮಣಕಾರರ ಅಧೀನದಲ್ಲಿದ್ದರು. ಅವರ ಆಶ್ರಯದಲ್ಲಿ ಬೌದ್ಧ ಕಲೆ ಕ್ಷೀಣದಶೆಯಲ್ಲಿತ್ತು. ಆದರೂ ಶಿಲ್ಪಗಳ ಮಾದರಿಯಲ್ಲಿ ಕೃತಿಗಳ ರಚನೆ ಮುಂದುವರಿಯಿತು. ಹೋಪೇ ಪ್ರಾಂತ್ಯದ ಚೆಂಗ್-ಟಿಂಗ್ ದೇವಾಲಯದಲ್ಲಿರುವ 45' ಎತ್ತರದ ಕಂಚಿನ ಕುಅನ್-ಯಿನ್ ಶಿಲ್ಪ ಈ ಕಾಲದ (971) ಉತ್ತಮ ಕೃತಿ. ಇದು ಚೀನದ ಅತ್ಯಂತ ಎತ್ತರವಾದ ಕಂಚಿನ ಶಿಲ್ಪ. ಪೂರ್ಣವಾಗಿದ್ದಾಗ 42 ಕೈಗಳಿದ್ದ ಈ ಬೃಹತ್ಕøತಿ ಬಹಳ ಗಮನಾರ್ಹವೂ ಅದ್ಭುತವೂ ಆಗಿದ್ದಿರಬೇಕು. ಈಗ ಬಹು ಮಟ್ಟಿಗೆ ಒಡೆದು ವಿರೂಪಗೊಂಡಿದೆ.

	ಉತ್ತರ ಭಾಗದಲ್ಲಿ ಬೌದ್ಧಧರ್ಮ ತಾತ್ತ್ವಿಕ ದೃಷ್ಟಿಯಿಂದಲ್ಲದಿದ್ದರೂ ಜನಪ್ರಿಯ ಪಂಥವಾಗಿ ಉಳಿದಿತ್ತು. 11-13ನೆಯ ಶತಮಾನಗಳಲ್ಲಿ ಅಲೆಮಾರಿ ಪಂಗಡಗಳ ಆಶ್ರಯದಲ್ಲಿ ಈ ಧರ್ಮ ಸ್ವಲ್ಪ ಪ್ರಭಾವಗಳಿಸಿತ್ತು. ಉತ್ತರ ಷಾನ್‍ಸೀ ಪ್ರಾಂತ್ಯದ ವು ಟೈ ಷಾನ್ ಈ ಪಂಥದ ಕೇಂದ್ರವಾಗಿತ್ತು. ಷಾನ್ಸೀ ಮತ್ತು ಹೋಪೇ ಪ್ರಾಂತ್ಯಗಳಲ್ಲಿ ಮತ್ತು ಮಹಾಗೋಡೆಯ ಉತ್ತರ ಭಾಗಕ್ಕೆ ಅನೇಕ ದೇವಾಲಯಗಳ ನಿರ್ಮಾಣವಾಯಿತು. ಆ ಮಂದಿರಗಳಲ್ಲಿರುವ ಶಿಲ್ಪಗಳಲ್ಲಿ ಎರಡು ಪ್ರತ್ಯೇಕ ಶೈಲಿಗಳಿವೆ. ಮೊದಲನೆಯದು ಕಲ್ಲಿನ ಶಿಲ್ಪಗಳಲ್ಲಿ ಕಂಡುಬಂದಿರುವ ಪ್ರಾಚೀನ ಪರಂಪರಾಗತ ಶೈಲಿ. ಪ್ರಾಚೀನ ಕಲಾಕೇಂದ್ರವಾದ ಯುನ್ ಕಾಂಗ್‍ನಲ್ಲಿ ಈ ಶೈಲಿಯ ಉತ್ತಮ ಕೃತಿಗಳು ನಿರ್ಮಿತವಾದವು. ಅಲ್ಲಿಯ ಅಪೂರ್ಣ ವಿಶಾಲಗುಹೆಯೊಂದರಲ್ಲಿ ಇಬ್ಬರು ಬೋಧಿಸತ್ತ್ವರ ನಡುವೆ ಇರುವ ಪದ್ಮಾಸನಸ್ಥ ಬುದ್ಧನ ದೊಡ್ಡ ವಿಗ್ರಹ ಗಮನಾರ್ಹ. ಪಾವೋ ಟಿಂಗ್‍ನ ಸುತ್ತ ಇರುವ ಅನೇಕ ಶಿಲ್ಪಗಳೂ ಈ ಶೈಲಿಗೆ ಸೇರಿದವು. ಎರಡನೆಯ ಶೈಲಿಯ ಕೃತಿಗಳನ್ನು ಬಹುವಾಗಿ ಜೇಡಿಮಣ್ಣು ಮತ್ತು ಮರದಿಂದ ಮಾಡಲಾಗುತ್ತಿತ್ತು. ಚೀನದ ಆವರೆಗಿನ ಶಿಲ್ಪಕಲೆಯ ಮಾದರಿಗಳಿಂದ ಬಹುಮಟ್ಟಿಗೆ ಪ್ರತ್ಯೇಕವಾದ ಈ ಶೈಲಿಯಲ್ಲಿ ಟಾಂಗ್ ಶಿಲ್ಪದ ಕೆಲವು ಲಕ್ಷಣಗಳಿದ್ದರೂ, ಇದು ಆ ಶೈಲಿಯ ಅಂಧಾನುಕರಣೆಯಲ್ಲ, ಜೀವಂತ ಕಳೆಯಿಂದ ಕೂಡಿದ ಈ ಕೃತಿಗಳ ಆಹ್ಲಾದಕರ ಸರಳ ನೈಜತೆ ಗಮನಾರ್ಹ. ಪದ್ಮಾಸನದಲ್ಲಿರುವ ಗಿಡ್ಡ ಕಾಲುಗಳು, ನೇರವೂ ನೀಳವೂ ಆದ ಮುಂಡ, ಸ್ವಲ್ಪ ಹಿಂದಕ್ಕೆ ವಾಲಿದಂತಿರುವ ತಲೆ-ಈ ಲಕ್ಷಣಗಳಿಂದ ಕೂಡಿದ ಈ ಶಿಲ್ಪಗಳ ಉತ್ತಮ ನಿದರ್ಶನವೆಂದರೆ ಷಾನ್‍ಸೀ ಪ್ರಾಂತ್ಯದ ಹ್ಸಿಯ-ಹುಅ-ಯೆನ್-ಸುದಲ್ಲಿ ಬೋಧಿಸತ್ತ್ವ ಮತ್ತು ದ್ವಾರಪಾಲಕರಿಂದ ಸುತ್ತುವರಿಯಲ್ಪಟ್ಟ ಮೂರು ಬುದ್ಧನ ವಿಗ್ರಹಗಳು (1038). ದೊಡ್ಡ ಕಮಲದ ಮೇಲೆ ಅಂದವಾದ ಬಣ್ಣಗಳಿಂದ ಅಲಂಕೃತವಾದ ಮರದ ಪ್ರಭಾವಳಿಯಿಂದ ಕೂಡಿದ ಶಾಕ್ಯಮುನಿ ಬುದ್ಧನನ್ನು ಪ್ರತಿಯೊಂದರಲ್ಲೂ ರೂಪಿಸಲಾಗಿದೆ. ಜೇಡಿಮಣ್ಣಿನ ವಿಗ್ರಹಗಳಿಗೆ ಬಣ್ಣಗಳನ್ನು ಹಚ್ಚಲಾಗಿದೆ. ಪ್ರಮಾಣಬದ್ಧ ದೇಹ, ಸರಳವೂ ಅಂದವೂ ಆದ ಉಡುಪಿನ ಮಡಿಕೆಗಳು, ಮುಖದ ಗಾಂಭೀರ್ಯ-ಇವು ಈ ಮೂರ್ತಿಗಳ ಸೌಂದರ್ಯವನ್ನು ಹೆಚ್ಚಿಸಿವೆ. ಬೋಧಿಸತ್ತ್ವ ವಿಗ್ರಹಗಳು ಸಹ ಅಷ್ಟೇ ಸುಂದರವೂ ಗಮನಾರ್ಹವೂ ಆದಂಥವು.

	ಕ್ಯಾನ್ಸಾಸ್ ನಗರದ ನೆಲ್ಸನ್ ಕಲಾಶಾಲೆಯಲ್ಲಿ 11-12ನೆಯ ಶತಮಾನಗಳಿಗೆ ಸೇರಿದ ಕಂಚಿನ ಶಾಕ್ಯಮುನಿಬುದ್ಧ ವಿಗ್ರಹವಿದೆ. ದುಂಡು ಮುಖ, ಮಾಟವಾದ ಕಣ್ಣುರೆಪ್ಪೆಗಳು, ಸುಂದರವಾದ ಬಾಯಿ, ಪ್ರಮಾಣಬದ್ಧವಾದ ದೇಹಕ್ಕೆ ಹೊಂದಿಕೊಂಡ ಉಡುಪು-ಇವುಗಳಿಂದ ಕೂಡಿದ ಕುಶಲಶಿಲ್ಪವಿದು.

	12-14ನೆಯ ಶತಮಾನಗಳಲ್ಲಿ ನಿರ್ಮಿಸಲಾದ ಮರದ ಕೃತಿಗಳೂ ಟ್ಯಾಂಗ್ ಕಾಲದ ಅನಂತರ ಸೃಷ್ಟಿಯಾದ ಬೌದ್ಧಶಿಲ್ಪಗಳ ಉತ್ತಮ ನಿದರ್ಶನಗಳು. ಇವು ಅಧಿಕ ಸಂಖ್ಯೆಯಲ್ಲಿ ಉಳಿದುಬಂದಿವೆ. ಈ ಶಿಲ್ಪಗಳಿಗೂ ಗೋಡೆಗಳ ಮೇಲೆ ರಚಿಸಿದ ವರ್ಣಚಿತ್ರಗಳಿಗೂ ಬಹಳ ಹೋಲಿಕೆಗಳುಂಟು. ವಿದೇಶಿ ಪ್ರಭಾವಗಳು, ಮುಖ್ಯವಾಗಿ ಭಾರತೀಯ ಪ್ರಭಾವಗಳು, ಈ ಕಾಲದಲ್ಲಿ ವಿರಳವಾಗಿ, ಚೀನೀ ಶೈಲಿ ಬೆಳೆದು ಬಂತು. ವಿಗ್ರಹಗಳ ಧಾರ್ಮಿಕ ಸ್ವರೂಪಕ್ಕೆ ಗಮನ ನೀಡದೆ, ನೈಜವಾದ ತುಂಬುದೇಹದ ಮತ್ತು ನೋಡುವವರಿಗೆ ಆಹ್ಲಾದ ನೀಡುವ ಸುಂದರರೂಪಗಳನ್ನು ಬಿಡಿಸುವ ಪ್ರಯತ್ನ ನಡೆಯಿತು. ಚಲನಾತ್ಮಕವಾದ, ಜೀವಂತ ಕಳೆಯನ್ನು ಸೂಸುವ ಸಂಪದ್ಭರಿತವಾದ ಮೂರು ಆಯಾಮಗಳ ಕಲ್ಪನೆ ಇದರ ಗುರಿಯಾಗಿದ್ದಂತೆ ಕಾಣುತ್ತದೆ. ಷಾನ್ ಸೀಯ ಕುಅಂಗ್-ಸ್ಸು ಎಂಬಲ್ಲಿಯ ಮೇಲ್ಗುಹೆಯಲ್ಲಿರುವ, ಸಿಂಹದ ಮೇಲೆ ಕುಳಿತ ಮಂಜುಶ್ರೀ ಮತ್ತು ಆನೆಯ ಮೇಲೆ ಕುಳಿತ ಸಮಂತಭದ್ರ ಬೋಧಿಸತ್ತ್ವರ ಮಧ್ಯೆ ಕುಳಿತ ಗೌತಮಬುದ್ಧ (ಸು. 1150) ಈ ಕಲೆಯ ಉತ್ತಮ ನಿದರ್ಶನ. ಆನೆಯನ್ನು ಅಂಕುಶದಿಂದ ಚುಚ್ಚಿ ನಡೆಸುತ್ತಿರುವ ಭಾರತೀಯ ಸೇವಕನ ಮತ್ತು ಸಿಂಹವಾಹನ ಮಂಜುಶ್ರೀಯ ಶಿಲ್ಪಗಳಲ್ಲಿ ನಾಟಕೀಯತೆಯೂ ನೈಜತೆಯೂ ಬೆರತಿವೆ. ಕ್ಯಾನ್ಸಾನ್ ನಗರದ ನೆಲ್ಸನ್ ಕಲಾಶಾಲೆಯಲ್ಲಿರುವ 12-13ನೆಯ ಶತಮಾನಗಳಿಗೆ ಸೇರಿದ, ವಿವಿಧ ವರ್ಣಲೇಪಿತವಾದ, ಮರದ ಕುಅನ್-ಯಿನ್ ಬೋಧಿಸತ್ತ್ವ ವಿಗ್ರಹವೊಂದುಂಟು. ಇದೊಂದು ಸೂಕ್ಷ್ಮ ಕೆತ್ತನೆ, ಪದ್ಮದ ಮೇಲೆ ಸರಳವಾಗಿ ಮಹಾರಾಜಲೀಲಾಭಂಗಿಯಲ್ಲಿ ಕುಳಿತ ಮೂರ್ತಿಯದು. ಆಸನದ ಮೇಲೆ ಇಟ್ಟ ಬಲಗಾಲು; ಮೊಳಕಾಲಿನ ಎಡಗಾಲು; ತಳದಲ್ಲಿ ಪದ್ಮ, ಥಟ್ಟನೆ ಎದ್ದು ಬರಲಿರುವಂತೆ ಕಾಣುವ ಈ ಮೂರ್ತಿಯಲ್ಲಿ ಇಹಲೋಕವಿಮುಖನಾದ ಬೋಧಿಸತ್ತ್ವನ ಪಾರಮಾರ್ಥಿಕತೆ ಕಾಣುವುದಿಲ್ಲ. 14ನೆಯ ಶತಮಾನದ ವೇಳೆಗೆ ಈ ಶೈಲಿ ಕ್ಷೀಣವಾಗತೊಡಗಿತು. ಅಂಗಸೌಷ್ಠವವಿಲ್ಲದ, ಒರಟಾದ, ಅಕುಶಲವಾದ ದಪ್ಪ ಶಿಲ್ಪಗಳು ಕಂಡುಬಂದುವು.	

	ಬುದ್ಧನ ಪರಿಚಾರಕ ವರ್ಗ ಹಾಗೂ ಟೌ ಧರ್ಮದ ಅನುಯಾಯಿಗಳ ಸಮ್ಮಿಳನದಿಂದ ಹುಟ್ಟಿದ ಲೋಹನ್ ವಿಗ್ರಹಗಳು ಈ ಕಾಲದಲ್ಲಿ ಹೆಚ್ಚಾಗಿ ನಿರ್ಮಾಣವಾದುವು. ಕುಶಲ ಶಿಲ್ಪಿಗಳು ಪ್ರೌಢ ಚಿತ್ರಕಾರರ ಮಾದರಿಗಳನ್ನು ಅನುಸರಿಸಿ ಲೋಹನ್ ಶಿಲ್ಪಗಳನ್ನು ರಚಿಸುತ್ತಿದ್ದರು. ದಕ್ಷಿಣ ಚೀನದ ಷೆನ್ ಸೀ ಪ್ರಾಂತ್ಯದಲ್ಲಿ 1099ರಲ್ಲಿ ನಿರ್ಮಿಸಿದ ಲೋಹನ್ ಶಿಲ್ಪದಲ್ಲಿ ಸರಳ ನಿರೂಪಣೆಯಿದೆ. ಮರದಲ್ಲಿ ಮಾಡಿದ ಬೋಧಿಸತ್ತ್ವ ವಿಗ್ರಹಗಳನ್ನು ಇದು ಹೋಲುತ್ತದೆ. ಈ ಶೈಲಿ ಬಹಳ ಕಾಲ ರೂಢಿಯಲ್ಲಿದ್ದು 17ನೆಯ ಶತಮಾನದ ಕುಅನ್-ಯಿನ್ ಶಿಲ್ಪಗಳಲ್ಲೂ ಪ್ರತಿಬಿಂಬಿತವಾಯಿತು. ಈ ಶಿಲ್ಪಗಳ ತಂತ್ರ ಸಹ ವಿನೂತನವಾದದ್ದು. ಜೇಡಿಮಣ್ಣಿನ ಮೂಲ ವಿಗ್ರಹದ ಮೇಲೆ ಅರಗಿನಲ್ಲಿ ತೋಯಿಸಿದ ಬಟ್ಟೆಯನ್ನು ಮೆತ್ತಿ ಆಕೃತಿಯನ್ನು ರೂಪಿಸಿ ಮೇಲ್ಮೈಯಲ್ಲಿ ಅರಗನ್ನು ದಪ್ಪವಾಗಿ ಲೇಪಿಸಿ, ಅದರಲ್ಲಿ ಅಂಗಗಳನ್ನು ಸೂಕ್ಷ್ಮವಾಗಿ ಬಿಡಿಸಲಾಗುತ್ತಿತ್ತು. ಅನಂತರ ಒಳಗಿನ ಜೇಡಿಮಣ್ಣನ್ನು ಕೊರೆದು ತೆಗೆಯುತ್ತಿದ್ದುದರಿಂದ ಶಿಲ್ಪ ಹಗುರವಾಗುತ್ತಿತ್ತು. ಜಪಾನಿನ ಟೆಂಪ್ಸೋ ವಂಶದ ಕಾಲದಲ್ಲಿ ಇಂಥ ಒಣ ಅರಗಿನ ಶಿಲ್ಪಗಳು ಬಳಕೆಯಲ್ಲಿದ್ದುವು.

	ಹೋಪೇ ಪ್ರಾಂತ್ಯದ ಐ-ಚೌ ಗುಹೆಗಳಲ್ಲಿರುವ, ಮೆರಗುಗೊಳಿಸಿ ಜೇಡಿಮಣ್ಣಿನ, ಲೋಹದ ಶಿಲ್ಪಗಳಲ್ಲಿ ಪ್ರತಿಕೃತಿಗಳ ಲಕ್ಷಣ ಕಾಣುತ್ತದೆ. ಇಂಥ ಶಿಲ್ಪಗಳ ಉತ್ತಮ ನಿದರ್ಶನವೆಂದರೆ ನ್ಯೂಯಾರ್ಕಿನ ಮೆಟ್ರೋಪಾಲಿಟಿನ್ ಸಂಗ್ರಹಾಲಯದಲ್ಲಿರುವ ಸಂತನ ಮೂರ್ತಿ. ಧಾನ್ಯಮಗ್ನನಾದ ಸಂತ ಉಪದೇಶ ಮಾಡಲು ಸಿದ್ಧನಾಗಿ ಕುಳಿತಂತೆ ಚಿತ್ರಿಸಲಾಗಿದೆ.

	11-14ನೆಯ ಶತಮಾನದ ಬೌದ್ಧಶಿಲ್ಪವನ್ನು ಚೀನೀ ಶಿಲ್ಪದ ಕೊನೆಯ ಹಂತವೆಂದು ಪರಿಗಣಿಸಲಾಗಿದೆ. ಬೌದ್ಧ ಧರ್ಮ ಕ್ಷೀಣದಶೆ ಹೊಂದಿತ್ತು. ಟೆಬೆಟ್ಟಿನ ಲಾಮ ಪಂಥ ಅನಂತರ ಮೇಲುಗೈ ಪಡೆಯಿತು. ತಾಂತ್ರಿಕ ಆಚಾರಗಳಿಂದ ತುಂಬಿದ್ದ ಈ ಪಂಥದ ಶಿಲ್ಪಗಳಲ್ಲಿ ಭಾರತದ ಬಿಹಾರಪ್ರಾಂತ್ಯದ ತಾಂತ್ರಿಕ ವಿಧಿಗಳಿಗೆ ಅನುಗುಣವಾಗಿ ಶಿಲ್ಪನಿರ್ಮಾಣ ಆಯಿತು. ಅದರಲ್ಲಿ ಹೊಸದೇನೂ ಇರಲಿಲ್ಲ. ಚೀನೀ ಶಿಲ್ಪ ಶೈಲಿಗೆ ಸೇರಿದ್ದೆಂದು ಅದನ್ನು ಪರಿಗಣಿಸಲು ಸಾಧ್ಯವಿಲ್ಲ.	  (ಜಿ.ಕೆ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ